ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿನಲ್ಲಿ ಭಾಗವಹಿಸಿದ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಬಲಪ್ರದರ್ಶನ ನಡೆಸಿತು. ಇಲ್ಲಿನ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿಯ ಮೈದಾನದಲ್ಲಿ ಎನ್ಎಂಪಿಎ ಮತ್ತು ಎಂಆರ್ಪಿಎಲ್ನ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದರು. ಮಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮೋದಿ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಫಲಾನುಗಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು. ಸುಮಾರು 60 ಸಾವಿರ ಮಂದಿಗೆ ಆಹ್ವಾನ ನೀಡಲಾಗಿದ್ದು, ಅವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೆ ತಿಂಗಳುಗಳು ಬಾಕಿ ಇರುವುದರಿಂದ ಪ್ರಧಾನಿ ಮಂಗಳೂರು ಭೇಟಿಯನ್ನು ಬಿಜೆಪಿ ಪಕ್ಷ ಯಶಸ್ವಿಯಾಗಿ ಮಾಡಲು ನಿರ್ಧರಿಸಿತ್ತು. ಇತ್ತೀಚೆಗೆ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಂಗಳೂರು ಭೇಟಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ.
ನಗರ ಪೂರ್ತಿ ಕೇಸರಿಮಯ: ಇದು ಪ್ರಧಾನಿಗಳ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಮಂಗಳೂರು ನಗರ ಪೂರ್ತಿ ಕೇಸರಿಮಯವಾಗಿತ್ತು. ಬಿಜೆಪಿ ಬೂತ್ ಮಟ್ಟಗಳಿಂದ ಕಾರ್ಯಕರ್ತರು ಜನರನ್ನು ವಾಹನ ಮಾಡಿ ಕರೆದುಕೊಂಡು ಬಂದಿದ್ದು, ಇಂದಿನ ಸಭೆಯಲ್ಲಿ ಸುಮಾರು 2 ಲಕ್ಷ ಮಂದಿ ಭಾಗವಹಿಸಿದ್ದರು. ನಗರದೆಲ್ಲೆಡೆ ಬಿಜೆಪಿಯ ಬಾವುಟಗಳು ರಾರಾಜಿಸಿದ್ದರೆ, ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು ಕೇಸರಿ ಶಾಲು, ಬಿಜೆಪಿ ಬಾವುಟಗಳೊಂದಿಗೆ ಜೈಕಾರ ಹಾಕುತ್ತಿದ್ದರು.
ಮೋದಿ ಮತ್ತು ಯಡಿಯೂರಪ್ಪಗೆ ಭಾರಿ ಜೈಕಾರ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು ಭಾರಿ ಜೈಕಾರಗಳನ್ನು ಹಾಕಿದ್ದರು. ಪ್ರಧಾನಿ ವೇದಿಕೆಗೆ ಬರುವ ಮುಂಚೆ ಮತ್ತು ಬಂದ ಬಳಿಕವು ಭಾರಿ ಜೈಕಾರ ಕೇಳಿ ಬಂದಿತ್ತು. ಇನ್ನೂ ವೇದಿಕೆಗೆ ಯಡಿಯೂರಪ್ಪ ಅವರು ಬಂದ ಸಂದರ್ಭದಲ್ಲಿಯೂ ಕಾರ್ಯಕರ್ತರು ಜೈಕಾರ ಕೂಗಿದರು.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭಾಷಣ