ಮಂಗಳೂರು: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ನೀಡಬೇಕಾದ ಪರಿಹಾರದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ. ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ ವೈರಿಯಂತೆ ನೋಡುತ್ತಿದ್ದು, ಈ ರೀತಿಯ ಅವಮಾನ ಸಹಿಸಿಕೊಂಡು ಬಿಜೆಪಿ ಆಡಳಿತ ನಡೆಸಬೇಕಾ ಎಂದು ಮಾಜಿ ಸಚಿವ ಯು. ಟಿ. ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಹ ಪರಿಸ್ಥಿತಿ ಬಗ್ಗೆ ರಾಜ್ಯ ನೀಡಿದ ವರದಿಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಮುಖ್ಯಮಂತ್ರಿಗಳಿಗೆ, ಆರೂವರೆ ಕೋಟಿ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ರಾಜ್ಯದ ವರದಿ ಸರಿಯಿಲ್ಲ ಅಂದಿದ್ದರೆ ಕೇಂದ್ರದ ನಿಯೋಗ ಪರಿಶೀಲನೆ ಮಾಡಿ ನೀಡಿದ ವರದಿ ಆಧಾರದ ಮೇಲಾದರೂ ಪರಿಹಾರ ಘೋಷಣೆ ಮಾಡಬಹುದಿತ್ತಲ್ವ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಖಜಾನೆ ಖಾಲಿ ಎಂದಿರುವುದು ಗೊಂದಲ ಮೂಡಿಸಿದೆ. ಆರಂಭದಲ್ಲಿ ಖಜಾನೆ ತುಂಬಿದೆ ಎಂದಿದ್ದರು, ಈಗ ಖಜಾನೆ ಖಾಲಿ ಎನ್ನುತ್ತಾರೆ. ರಾಜ್ಯದ ಆರ್ಥಿಕ ವ್ಯವಸ್ಥೆ ಬಗೆಯ ಶೀಘ್ರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎನ್ಆರ್ಇಸಿ ಜಾರಿ ಬಗ್ಗೆ ಗೃಹಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ರಾಜ್ಯ ಗೃಹಸಚಿವರಲ್ಲಿ ಮಾತನಾಡಿದ್ದೇನೆ. ಅವರು ನೈಜೀರಿಯ ಸೇರಿದಂತೆ ಕೆಲವು ದೇಶಗಳಿಂದ ಬಂದವರು ವೀಸಾ ಅವಧಿ ಮುಗಿದರೂ ವಾಪಾಸ್ ಹೋಗದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಜನತೆಗೆ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದಿದ್ದಾರೆ ಎಂದರು.