ಪುತ್ತೂರು: ತಳ ಮಟ್ಟದಿಂದ ಹಿಡಿದು ಕೇಂದ್ರದವರೆಗೂ ಬಿಜೆಪಿ ಸರಕಾರವಿದೆ. ಈ ಅಭಿಯಾನ ಇಲ್ಲಿಗೆ ನಿಲ್ಲಬಾರದು. ಮುಂದಿನ ದಿನಗಳಲ್ಲಿ ಬಿಜೆಪಿ ಮನೆ ಮನೆಯ ಪಕ್ಷವಾಗಿ ಬೆಳೆಯಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ರಾಜ್ಯಮಟ್ಟದಲ್ಲಿ ಕೈಗೊಂಡಿರುವ ಗ್ರಾಮ ಸ್ವರಾಜ್ಯ ಅಭಿಯಾನದ ಸರಣಿಯಲ್ಲಿ ಶನಿವಾರ ಅಪರಾಹ್ನ ಪುತ್ತೂರಿನಲ್ಲಿ ನಡೆದ ಸುಳ್ಯ, ಬೆಳ್ತಂಗಡಿ, ಪುತ್ತೂರು ಮಂಡಲಗಳ ಅಪೇಕ್ಷಿತ ಕಾರ್ಯಕರ್ತ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದರು.
ದೇಶ ಮೋದಿ ನಾಯಕತ್ವದಲ್ಲಿ ಅಮೋಘ ಪ್ರಗತಿ ನಡೆದಿದೆ. ಇದನ್ನು ಮುಂದಿಟ್ಟುಕೊಂಡು ಪಂಚಾಯಿತಿ ಚುನಾವಣೆಗೆ ಸಜ್ಜಾಗಬೇಕು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ನಮ್ಮ ಉದ್ದೇಶ. ಇದು ಈ ಚುನಾವಣೆಯಲ್ಲೂ ಪ್ರತಿಫಲನಗೊಂಡು ಎಲ್ಲ ಪಂಚಾಯಿತಿಗಳನ್ನು ನಮ್ಮ ಪಕ್ಷ ಗೆಲ್ಲಬೇಕು ಎಂದು ನುಡಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿರ್ಮಾಣದ ತಳಹದಿ. ಸಂಸದೆ ಶೋಭಾ ಕರಂದ್ಲಾಜೆ, ಕೋಲಾರ ಸಂಸದ ಮುನಿಸ್ವಾಮಿ, ಸುಳ್ಯ ಶಾಸಕ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್,ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮುಂತಾದವರು ಉಪಸ್ಥಿತರಿದ್ದರು.