ಮಂಗಳೂರು: ಒಂದೂವರೆ ವರ್ಷದಲ್ಲಿ ಆಡಳಿತ ಕುಂಠಿತವಾಗಿ ಮಲಗಿರುವ ಸರ್ಕಾರ ಇತ್ತು. ಆದರೆ ಇಂದು ಚಲನವಲನದ ಸರ್ಕಾರ ಬಂದಿದ್ದು ಅಭಿವೃದ್ಧಿಯ ಮಹಾಪೂರ ಹರಿಯುತ್ತದೆ ಎಂಬ ವಿಶ್ವಾಸ ಜನರಿಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸರ್ಕಾರದ ನೂರು ದಿನಗಳ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ನಗರದ ಮಹಾನಗರ ಪಾಲಿಕೆಗೆ ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ 200 ಕೋಟಿ ರೂ. ಅನುದಾನವನ್ನು ನೀಡಿದ್ದರು. ಹಿಂದಿನ ಬಿಜೆಪಿ ಶಾಸಕರುಗಳ ಪರಿಶ್ರಮದಿಂದ ಕೋರ್ಟ್ ಕಾಮಗಾರಿ, ಸರ್ಕ್ಯೂಟ್ ಹೌಸ್, ಕಮಿಷನರೇಟ್ ಕಚೇರಿ, ಮಿನಿ ವಿಧಾನಸೌಧಗಳ ನಿರ್ಮಾಣ, ಕುಡಿಯುವ ನೀರಿಗೆ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯಿತು. ಆದರೆ ಬಳಿಕ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಅಭ್ಯರ್ಥಿಗಳಿಂದ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗಲೂ ನಿದ್ದೆಯಲ್ಲಿದ್ದರು. ಈಗಲೂ ನಿದ್ದೆಯಲ್ಲಿರಬೇಕು. ಒಂದು ಬಾರಿ ಕಣ್ಣು ಬಿಟ್ಟು ನೋಡಲಿ ಎಂದರು.
ಟಿಪ್ಪು ಜಯಂತಿ ಕುರಿತು ಮಾತನಾಡಿ, ಟಿಪ್ಪು ಜಯಂತಿ ಮಾಡಿರುವುದು ಸಿದ್ದರಾಮಯ್ಯ ಸರ್ಕಾರ. ಬಿಜೆಪಿ ಸರ್ಕಾರ ಅಲ್ಲ. ಸಿದ್ದರಾಮಯ್ಯರ ಸರ್ಕಾರವೇ ಟಿಪ್ಪುವನ್ನು ಕ್ರೂರಿ ಎಂದಿದೆ. ಈಗ ಯಾಕೆ ದ್ವಂದ್ವ ನೀತಿ ಎಂದು ಪ್ರಶ್ನಿಸಿದರು.