ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕೂಡ ತನ್ನ ಬಲ ಹೆಚ್ಚಿಸಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರದಲ್ಲಿ 7ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಆದರೆ ಈ ಸಲ ಬಿಜೆಪಿ 6 ಸ್ಥಾನಗಳನ್ನು, ಕಾಂಗ್ರೆಸ್ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.
ಬಿಜೆಪಿ ಗೆದ್ದ ಕ್ಷೇತ್ರಗಳು- ಮಂಗಳೂರು ದಕ್ಷಿಣ: ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಂಗಳೂರು ನಗರದ ವ್ಯಾಪ್ತಿಯನ್ನು ಒಳಗೊಂಡಿರುವ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಜೆ ಆರ್ ಲೋಬೋ ಸೋಲನ್ನಪ್ಪಿದ್ದಾರೆ. ಈ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಮಾಜಿ ಬಿಜೆಪಿ ನಾಯಕ ಸತೀಶ್ ಪ್ರಭು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಂಡರೂ ಕಾಂಗ್ರೆಸ್ ಗೆಲುವಿಗೆ ಅದು ಸಹಕಾರಿಯಾಗಿಲ್ಲ.
ಮತಗಳ ವಿವರ:
ವೇದವ್ಯಾಸ ಕಾಮತ್ - ಬಿಜೆಪಿ - 91437
ಜೆ ಆರ್ ಲೋಬೋ - ಕಾಂಗ್ರೆಸ್- 67475
ಬಿಜೆಪಿಯ ಗೆಲುವಿನ ಅಂತರ 23962
ಮಂಗಳೂರು ಉತ್ತರ: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಸೇರಿದಂತೆ ಮಂಗಳೂರು ತಾಲೂಕಿನ ಗ್ರಾಮಾಂತರ ಭಾಗವನ್ನು ಒಳಗೊಂಡಿರುವ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಡಾ ವೈ ಭರತ್ ಶೆಟ್ಟಿ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಉದ್ಯಮಿ, ಡಿ ಕೆ ಶಿವಕುಮಾರ್ ಆಪ್ತ ಇನಾಯತ್ ಆಲಿ ಸೋಲನ್ನು ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮೊಯಿದ್ದಿನ್ ಬಾವ ಅವರು ಜೆಡಿಎಸ್ ನಿಂದ ಸ್ಪರ್ಧಿಸಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.
ಮತಗಳ ವಿವರ:
ಡಾ. ವೈ ಭರತ್ ಶೆಟ್ಟಿ- ಬಿಜೆಪಿ-103531
ಇನಾಯತ್ ಆಲಿ- ಕಾಂಗ್ರೆಸ್- 70609
ಮೊಯಿದ್ದಿನ್ ಬಾವ- ಜೆಡಿಎಸ್- 5256
ಬಿಜೆಪಿಯ ಗೆಲುವಿನ ಅಂತರ- 32922
ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ರಾಜೇಶ್ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ ರಮಾನಾಥ ರೈ ಸ್ಪರ್ಧಿಸಿದ್ದರು. ಈ ಬಾರಿ ಕಡೆಯ ಚುನಾವಣೆ ಎಂದು ಅವರು ಪ್ರಚಾರವನ್ನು ಮಾಡಿದ್ದರು. ಆದರೆ ಅವರ ಗೆಲುವು ಸಾಧ್ಯವಾಗಿಲ್ಲ.
ಮತಗಳ ವಿವರ:
ರಾಜೇಶ್ ನಾಯ್ಕ್- ಬಿಜೆಪಿ-93324
ಬಿ ರಮಾನಾಥ ರೈ - ಕಾಂಗ್ರೆಸ್-85042
ಬಿಜೆಪಿಯ ಗೆಲುವಿನ ಅಂತರ- 8282
ಮೂಡಬಿದಿರೆ: ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಮೂಡಬಿದಿರೆ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ಜಯ ಗಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಿಥುನ್ ರೈ ಸ್ಪರ್ಧಿಸಿದ್ದರು. ಮಿಥುನ್ ರೈ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎದುರು ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಆದರೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮಿಥುನ್ ರೈ ಗೆಲ್ಲುವ ಕನಸು ಕೂಡ ನನಸಾಗಲಿಲ್ಲ.
ಮತಗಳ ವಿವರ:
ಉಮನಾಥ ಕೋಟ್ಯಾನ್- ಬಿಜೆಪಿ-86925
ಮಿಥುನ್ ರೈ - ಕಾಂಗ್ರೆಸ್-64457
ಬಿಜೆಪಿಯ ಗೆಲುವಿನ ಅಂತರ-22468
ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಹರೀಶ್ ಪೂಂಜಾ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಮ್ ಸ್ಪರ್ಧಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯುವಕರು ಸ್ಪರ್ಧೆಯಲ್ಲಿದ್ದರು. ಯುವಕರ ನಡುವಿನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದೆ.
ಮತಗಳ ವಿವರ:
ಹರೀಶ್ ಪೂಂಜಾ- ಬಿಜೆಪಿ- 101004
ರಕ್ಷಿತ್ ಶಿವರಾಮ್- ಕಾಂಗ್ರೆಸ್-82788
ಬಿಜೆಪಿಯ ಗೆಲುವಿನ ಅಂತರ-18216
ಸುಳ್ಯ: ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದೆ. ಸುಳ್ಯ ಮೀಸಲು ಕ್ಷೇತ್ರದಿಂದ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಮೊದಲ ಬಾರಿಗೆ ಸ್ಪರ್ಧಿಸಿದ್ದ ಭಾಗೀರಥಿ ಮುರುಳ್ಯ ಅವರು ಗೆ್ದ್ದು ಶಾಸಕಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕೃಷ್ಣಪ್ಪ ಅವರು ಸೋಲನ್ನು ಅನುಭವಿಸಿದ್ದಾರೆ.
ಮತಗಳ ವಿವರ:
ಭಾಗೀರಥಿ ಮುರುಳ್ಯ- ಬಿಜೆಪಿ-93911
ಕೃಷ್ಣಪ್ಪ - ಕಾಂಗ್ರೆಸ್-63037
ಬಿಜೆಪಿಯ ಗೆಲುವಿನ ಅಂತರ-30874
ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು:
ಮಂಗಳೂರು: ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ಉಪನಾಯಕ , ಮಾಜಿ ಸಚಿವ ಯು ಟಿ ಖಾದರ್ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಯಿಂದ ಸತೀಶ್ ಕುಂಪಲ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಐದನೇ ಬಾರಿಗೆ ಗೆಲುವು ಸಾಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಸೋಲು ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಮತಗಳ ವಿವರ:
ಯು ಟಿ ಖಾದರ್- ಕಾಂಗ್ರೆಸ್- 83219
ಸತೀಶ್ ಕುಂಪಲ- ಬಿಜೆಪಿ-60429
ರಿಯಾಜ್ ಫರಂಗಿಪೇಟೆ- ಎಸ್ ಡಿ ಪಿ ಐ- 15054
ಕಾಂಗ್ರೆಸ್ ನ ಗೆಲುವಿನ ಅಂತರ-22790
ಪುತ್ತೂರು: ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಉದ್ಯಮಿ ಅಶೋಕ್ ಕುಮಾರ್ ರೈ ಸ್ಪರ್ಧಿಸಿದ್ದರು. ಇವರು ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಆಪ್ತ. ಇವರು ಪ್ರಜಾಧ್ವನಿ ಯಾತ್ರೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅಶೋಕ್ ಕುಮಾರ್ ರೈ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯವಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಪ್ರಬಲ ಪೈಪೋಟಿ ನೀಡಿದ್ದರು.ಈ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಮತಗಳ ವಿವರ:
ಅಶೋಕ್ ಕುಮಾರ್ ರೈ- ಕಾಂಗ್ರೆಸ್-66607
ಅರುಣ್ ಕುಮಾರ್ ಪುತ್ತಿಲ- ಪಕ್ಷೇತರ-62458
ಆಶಾ ತಿಮ್ಮಪ್ಪ - ಬಿಜೆಪಿ-37558
ಕಾಂಗ್ರೆಸ್ ಗೆಲುವಿನ ಅಂತರ-4149
ಜೈಲಿನಿಂದ ಸ್ಪರ್ಧಿಸಿದ್ದ ಶಾಪಿ ಬೆಳ್ಳಾರೆಗೆ 2788 ಮತ
ಪುತ್ತೂರು ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಫಿ ಬೆಳ್ಳಾರೆಗೆ 2788 ಮತಗಳು ಬಿದ್ದಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಶಾಪಿ ಬೆಳ್ಳಾರೆಯನ್ನು ಎನ್‌ಐಎ ಬಂಧಿಸಿತ್ತು. ಎನ್‌ಐಎ ಬಂಧನದಲ್ಲಿರುವ ಶಾಫಿ ಬೆಳ್ಳಾರೆ ಜೈಲಿನಿಂದಲೇ ಸ್ಪರ್ಧೆ ಮಾಡಿದ್ದರು. ಎಸ್ ಡಿ ಪಿ ಐ ಪಕ್ಷದಿಂದ ಸ್ಪರ್ಧಿಸಿರುವ ಅವರಿಗೆ ಕೇವಲ 2788 ಮತಗಳು ಮಾತ್ರ ಬಿದ್ದಿದೆ.
ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳಿದ ಪಕ್ಷೇತರ ಅಭ್ಯರ್ಥಿ: ಬಿಜೆಪಿಯ ಭದ್ರಕೋಟೆಯಾಗಿರುವ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದಕ್ಕೆ ಕಾರಣ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ. ಅರುಣ್ ಕುಮಾರ್ ಪುತ್ತಿಲ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ರೊಚ್ಚಿಗೆದ್ದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧಿಸಿದ್ದರು.
ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿಯನ್ನು ನೀಡಿದ್ದರು. ನಡುವೆ ಕೈ ಅಭ್ಯರ್ಥಿಗಿಂತ ಲೀಡನ್ನು ಪಡೆದಿದ್ದರು. ಪುತ್ತಿಲ ಕಾಂಗ್ರೆಸ್ ಅಭ್ಯರ್ಥಿ ಎದುರು 4149 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಪುತ್ತಿಲ ಸ್ಪರ್ಧೆಯಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಬಿಜೆಪಿಯ ಇಬ್ಬರು ಮಹಿಳೆಯರಲ್ಲಿ ಒಬ್ಬರು ಪಾಸ್: ಈ ಬಾರಿ ಗುಜರಾತ್ ಪ್ರಯೋಗವನ್ನು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪಿತ್ತು. ಪುತ್ತೂರು ಕ್ಷೇತ್ರದಲ್ಲಿ ಶಾಸಕ ಸಂಜೀವ ಮಠಂದೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಅಂಗಾರ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಈ ಎರಡು ಕ್ಷೇತ್ರದಲ್ಲಿ ಮಹಿಳೆಯರಿಗೆ ( ಪುತ್ತೂರು ಆಶಾ ತಿಮ್ಮಪ್ಪ, ಸುಳ್ಯ ಭಾಗೀರಥಿ ಮುರುಳ್ಯ) ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗವನ್ನು ಮಾಡಿತ್ತು. ಈ ಇಬ್ಬರು ಮಹಿಳೆಯರಲ್ಲಿ ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯ ಕಾರಣಕ್ಕೆ ಪುತ್ತೂರಿನಿಂದ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಸೋಲನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ, ವರುಣದಲ್ಲಿ ವಿ.ಸೋಮಣ್ಣಗೆ ಸೋಲು: 4ನೇ ಬಾರಿ ಗೆದ್ದ ಪುಟ್ಟರಂಗಶೆಟ್ಟಿ