ಮಂಗಳೂರು(ದಕ್ಷಿಣ ಕನ್ನಡ) : ರಾಜ್ಯ ಬಿಜೆಪಿ ಸರಕಾರಕ್ಕೆ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯಿದೆ. ಆದ್ದರಿಂದ ನಮಗೆ ಉಚಿತಗಳ ಮೇಲೆ ನಂಬಿಕೆಯಿಲ್ಲ. ಖಚಿತಗಳ ಮೇಲೆ ನಂಬಿಕೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಹಂತ ಹಂತವಾಗಿ ಯೋಜನೆಗಳ ಅನುಷ್ಠಾನ : ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಜನೆಗಳನ್ನು ಹಂತ ಹಂತವಾಗಿ ಬಿಜೆಪಿ ಸರಕಾರ ಗ್ರಾಪಂನಿಂದ ಹೆದ್ದಾರಿಗಳವರೆಗೆ ಅನುಷ್ಠಾನಗೊಳಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ 7 ಹೊಸಗ್ರಾಮ ಕುಡಿವ ನೀರಿಗೆ 1040 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಒಣಕಸವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಸ್ವಚ್ಛ ಭಾರತ ಮಿಷನ್ ನಡಿ 3 ಕೋಟಿ ರೂ. ವೆಚ್ಚದಲ್ಲಿ ಎಂಆರ್ ಎಫ್ ಘಟಕವನ್ನು ನಿರ್ಮಿಸಲಾಗಿದ್ದು, ಇಂದು ಅದರ ಉದ್ಘಾಟನೆಯು ನಡೆಯಲಿದೆ ಎಂದರು.
ನೂತನವಾಗಿ ಸ್ಥಾಪನೆಗೊಂಡ ಮೂಡುಬಿದಿರೆ ತಾಲೂಕಿಗೆ 5.35 ಕೋಟಿ ರೂ. ಹಾಗೂ ಕಡಬ ತಾಲೂಕಿಗೆ 4.50 ಕೋಟಿ ರೂ. ಅನುದಾನದಡಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಆರೋಗ್ಯ ಸೇವೆ ಮನೆ ಬಾಗಿಲಿಗೆ ದೊರಕಬೇಕೆನ್ನುವ ದೃಷ್ಟಿಯಿಂದ ದ.ಕ.ಜಿಲ್ಲೆಯಲ್ಲಿ 12 ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಡೀಮ್ಡ್ ಫಾರೆಸ್ಟ್ ಗೆ ಸಂಬಂಧಿಸಿದಂತೆ ಹಲವು ವರ್ಷಗಳ ಸಮಸ್ಯೆ ಬಗೆಹರಿಸಲು ತಜ್ಞ ಸಮಿತಿಯ ವರದಿ ಹಿನ್ನೆಲೆ ದ.ಕ.ಜಿಲ್ಲೆಯಲ್ಲಿ 34,850 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಯೋಜನೆಗಳು :ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 7 ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂ 1040.00 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಧ್ಯೇಯೋದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಒಟ್ಟು ರೂ. 576.00 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳನ್ನೊಳಗೊಂಡಂತೆ ಅಧಿಕಾರಿ ಮತ್ತು ಇತರೆ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲು ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರವನ್ನು ರೂ. 1.5 ಕೋಟಿ ವೆಚ್ಚದಲ್ಲಿ ಮಂಗಳೂರು ತಾಲೂಕು ಅಡ್ಯಾರು ಇಲ್ಲಿ ನಿರ್ಮಿಸಲಾಗಿದ್ದು, ಸದರಿ ತರಬೇತಿ ಕೇಂದ್ರವನ್ನು ಸಹ ಈದಿನ ಉದ್ಘಾಟನೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೌಚಾಲಯಗಳಲ್ಲಿ ಉತ್ಪತ್ತಿಯಾಗುವ ಬೂದು ನೀರು ಮತ್ತು ಕಪ್ಪು ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಬಂಟ್ವಾಳ ತಾಲೂಕಿನ ಗೋಳ್ತಮಜಲಿನಲ್ಲಿ ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಲತ್ಯಾಜ್ಯ ಘಟಕವನ್ನು ನಿರ್ಮಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಅಮೃತ ಗ್ರಾಮ ಪಂಚಾಯತ್, ಅಮೃತ ಅಂಗನವಾಡಿ, ಅಮೃತ ಆರೋಗ್ಯ, ಅಮೃತ ಶಾಲೆ, ಅಮೃತ ಸ್ವಸಹಾಯ ಈ ಶೀರ್ಷಿಕೆಯಡಿ ಜಿಲ್ಲೆಗೆ ಸುಮಾರು ಒಟ್ಟು ರೂ. 8 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಯೋಜನೆಯಡಿ ಜಿಲ್ಲೆಯ 1,39,992 ರೈತರಿಗೆ ಒಟ್ಟು ರೂ. 128.00 ಕೋಟಿ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ ಎಂದರು.
ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ : ಈ ಕಾರ್ಯಕ್ರಮದಡಿ 37,000 ವಿದ್ಯಾರ್ಥಿಗಳಿಗೆ ರೂ. 18.02 ಕೋಟಿ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗಿದೆ. ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಯೋಜನೆಯಡಿ ಜಿಲ್ಲೆಯಲ್ಲಿ 66 ಉದ್ದಿಮೆಗಳಿಗೆ ರೂ. 8.83 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಠಿಯಿಂದ ಶಾಲೆಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ವಿವೇಕ ಶಾಲೆಗಳ ಯೋಜನೆಯಡಿ 275 ಕೊಠಡಿಗಳಿಗೆ ರೂ. 39.32 ಕೋಟಿ ಅನುದಾನವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ.
ಶಾಲೆಗಳ ದುರಸ್ತಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ರೂ. 50 ಲಕ್ಷದಂತೆ ರೂ. 4 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಅನುದಾನದಡಿ 289 ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ ರೂ. 5.54 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಇದನ್ನೂ ಓದಿ :ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ತೆರೆ: ಈ ಸಲ 159 ಜೋಡಿ ಕೋಣಗಳು ಭಾಗಿ