ಮಂಗಳೂರು: ವಿವಿಧ ಸಮುದಾಯಗಳು ರಾಜ್ಯ ಸರ್ಕಾರಕ್ಕೆ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ, ಜಾಥಾ ನಡೆಸಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುತ್ತಿವೆ. ಇದಕ್ಕೆ ಸರ್ಕಾರ ತನ್ನದೇ ಆದ ರೀತಿಯಲ್ಲಿ ಸ್ಪಂದಿಸಿ ಅಲ್ಪ ಮಟ್ಟಿಗೆ ಪ್ರತಿಭಟನೆಯ ಬಿಸಿಯನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದೆ. ಇದೀಗ ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕುದ್ರೋಳಿ ಶ್ರೀಕ್ಷೇತ್ರದಲ್ಲಿ ಪಾದಯಾತ್ರೆ ಶುರುವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭವಾಗಿದೆ.
ಪಾದಯಾತ್ರೆ ಆರಂಭಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಪ್ರಣವಾನಂದ ಸ್ವಾಮೀಜಿ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ ನಾರಾಯಣ ಗುರು ಅಭಿವೃದ್ಧಿ ನಿಗಮವು ಸಮುದಾಯದ ಹಿತಾಸಕ್ತಿಗೆ ವಿರುದ್ಧವಾದಲ್ಲಿ ನಿಗಮವನ್ನು ನಿಲ್ಲಿಸುವಂತೆ ಆಗ್ರಹಿಸಿ ಪಾದಯಾತ್ರೆ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ಸರ್ಕಾರ ನಾರಾಯಣ ಗುರು ಅಭಿವೃದ್ಧಿ ನಿಗಮದ ಘೋಷಣೆಯನ್ನು ನಿನ್ನೆ ಮಾಡಿದೆ. ಆದರೆ, ಎಷ್ಟು ಅನುದಾನ ಮೀಸಲಿರಿಸಲಾಗಿದೆ ಎಂದು ಇನ್ನೂ ನಮಗೆ ತಿಳಿದಿಲ್ಲ. ಒಂದು ವೇಳೆ ನಿಗಮ ಘೋಷಣೆ ಮಾಡಿ, ಬಿಲ್ಲವ ಸಮುದಾಯದ ಪರ ಕೆಲಸ ಮಾಡದಿದ್ದರೆ ಈ ನಿಗಮವನ್ನು ನಿಲ್ಲಿಸಲು ಮತ್ತೊಂದು ಪಾದಯಾತ್ರೆ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ನನ್ನ ಕೆಲಸವನ್ನು ಹತ್ತಿಕ್ಕಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ, ಸಮುದಾಯದ ಜನ ನನ್ನ ಜೊತೆ ಇದ್ದಾರೆ. ಪ್ರಣವಾನಂದ ಸ್ವಾಮೀಜಿಯನ್ನು ಮಾನಸಿಕವಾಗಿ ಕುಗ್ಗಿಸಿ ಆ ಮೂಲಕ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಈ ಪಾದಯಾತ್ರೆ ಮೂಲಕ ನಮ್ಮ ಎಲ್ಲಾ ಬೇಡಿಕೆಗಳು ಈಡೇರಲಿದೆ ಎಂಬ ಭ್ರಮೆ ನನಗಿಲ್ಲ. 648 ಕಿ.ಮೀ. ಪಾದಯಾತ್ರೆ ಮಾಡುವಾಗ ಲಕ್ಷಾಂತರ ಮಂದಿ ನನ್ನ ಹಿಂದೆ ಬರುತ್ತಾರೆಂಬ ಭಾವನೆಯೂ ನನಗಿಲ್ಲ. ಆದರೆ ನನ್ನ ಸಮುದಾಯದ ಜೀವನದಲ್ಲಿ ನಾನಿರುತ್ತೇನೆ. ನಮ್ಮ 10 ಬೇಡಿಕೆಗಳಲ್ಲಿ ಒಂದು ಬೇಡಿಕೆ ಈಡೇರದಿದ್ದರೂ ನಮ್ಮ ಈ ಹೋರಾಟ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಐತಿಹಾಸಿಕ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ
ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿಯವರು ಮಂಗಳೂರಿನಿಂದ ಬೆಂಗಳೂರಿಗೆ ನಡೆಯುತ್ತಿರುವ ಐತಿಹಾಸಿಕ ಪಾದಯಾತ್ರೆಗೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.
40 ದಿನಗಳವರೆಗೆ ನಡೆಯಲಿರುವ ಪಾದಯಾತ್ರೆ: ಕುದ್ರೋಳಿ ಶ್ರೀಕ್ಷೇತ್ರದಿಂದ ಆರಂಭವಾದ ಪಾದಯಾತ್ರೆ ಇಂದು 13 ಕಿ.ಮೀ. ದೂರದ ಕುಳಾಯಿವರೆಗೆ ಸಾಗಲಿದೆ. ಬಳಿಕ ಸಂಜೆ ವೇಳೆಗೆ ಅಲ್ಲಿನ ಬಿಲ್ಲವ ಸಂಘದಲ್ಲಿ ಜಾಗೃತಿ ಸಭೆ ನಡೆಯಲಿದೆ. ಪಾದಯಾತ್ರೆ ಇಂದು ಅಲ್ಲಿಯೇ ತಂಗಿ, ನಾಳೆ ಮತ್ತೆ ಆರಂಭವಾಗಿ ಹೆಜಮಾಡಿಮಾಡಿವರೆಗೆ ಸಾಗುತ್ತದೆ. ಹೀಗೆ ಪಾದಯಾತ್ರೆಯು ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. 40 ದಿನಗಳವರೆಗೆ 658 ಕಿ.ಮೀ. ಕ್ರಮಿಸಿ ಬೆಂಗಳೂರು ತಲುಪಲಿದೆ.
ಇದನ್ನೂ ಓದಿ: ಬಿಜೆಪಿಯಿಂದ ಸಮುದಾಯಗಳನ್ನು ಹತ್ತಿಕ್ಕುವ ಕೆಲಸ: ಪ್ರಣವಾನಂದ ಸ್ವಾಮೀಜಿ ಆರೋಪ