ಬಂಟ್ವಾಳ: ಬೆಳೆಗಳ ವಿವರ, ಸೌಲಭ್ಯಗಳು, ಬೆಳೆ ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರೈತರೇ ತಮ್ಮ ಬೆಳೆಗಳ ವಿವರವನ್ನು ಬೆಳೆ ಸಮೀಕ್ಷೆ ಆ್ಯಪ್ ಗೆ ಅಪ್ಲೋಡ್ ಮಾಡುತ್ತಿರುವ ಕಾರ್ಯಕ್ಕೆ ವೇಗ ದೊರಕಿದೆ.
ಕಳೆದ ವಾರಾಂತ್ಯದ ವೇಳೆಗೆ ಸುಮಾರು 19,500 ಸಬ್ ಸರ್ವೇ ನಂಬರ್ ಗಳು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಕೃಷಿ ಇಲಾಖೆಗೆ ಅಪ್ಲೋಡ್ ಆಗಿವೆ. ರೈತರ ಪಹಣಿ ಪತ್ರದಲ್ಲಿರುವ ಸಬ್ ಸರ್ವೇ ನಂಬರ್ ಗಳನ್ನು ಫ್ಲಾಟ್ ಎಂದು ಗುರುತಿಸಲಾಗುತ್ತಿದ್ದು, ಸಾಮಾನ್ಯವಾಗಿ ಒಂದು ಆರ್ ಟಿ ಸಿ ಯಲ್ಲಿ ಒಂದಕ್ಕಿಂತ ಹೆಚ್ಚು ಸಬ್ ಸರ್ವೇ ನಂಬರ್ ಗಳಿರುತ್ತವೆ.
ತಾಲೂಕಿನಲ್ಲಿ ಒಟ್ಟು 2,26,218 ಫ್ಲಾಟ್ ಗಳಿದ್ದು, 19,500 ಫ್ಲಾಟ್ ಗಳಿದ್ದು ಅಪ್ಲೋಡ್ ಆಗಿದೆ. ಎಲ್ಲಾ ರೈತರಿಗೆ ಅಪ್ಲೋಡ್ ಮಾಡಲು ಸಾಧ್ಯವಾಗದ ಹಿನ್ನೆಲೆ ಅಂತವರ ನೆರವಿಗೆ ಪಿ.ಆರ್ ಗಳು ಮುಂದಾಗಿದ್ದಾರೆ.
ಬೆಳೆ ಕುರಿತು ಮಾಹಿತಿ ಅಪ್ಲೋಡ್ ಮಾಡಬೇಕಾದ ಹಿನ್ನೆಲೆ ಸ್ಥಳೀಯರನ್ನೇ ಪಿ ಆರ್ ಗಳಾಗಿ ನೇಮಕ ಮಾಡಲಾಗಿದ್ದು, ತಾಲೂಕಿನಲ್ಲಿ 189 ಮಂದಿ ಪಿ ಆರ್ ಗಳಿದ್ದಾರೆ. ಮೊಬೈಲ್ ಜ್ಞಾನ ಇರುವವರು, ರೈತರ ಮಕ್ಕಳನ್ನು ಸ್ಥಳೀಯವಾಗಿ ಪಿ ಆರ್ ಗಳನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಮಾಹಿತಿ ಅಪ್ಲೋಡ್ ಮಾಡುವುದಕ್ಕೆ ಆಗಸ್ಟ್ 24 ರವರೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ದಿನಾಂಕ ವಿಸ್ತರಣೆಯಾಗಿದ್ದು, ಸೆ. 23 ರ ವರೆಗೆ ಅವಕಾಶವಿದೆ.