ಬೆಳ್ತಂಗಡಿ(ದಕ್ಷಿಣ ಕನ್ನಡ) : ಬೆಂಗಳೂರು ಉತ್ತರ ವಿಭಾಗದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ ಕುಮಾರ್(45) ಧರ್ಮಸ್ಥಳದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನರೇಂದ್ರ ಅವರು ಯಲಹಂಕ ಮತ್ತು ಬಂಡಿಕೊಡಿಗೆಹಳ್ಳಿಯಲ್ಲಿರುವ ಜ್ಞಾನಕ್ಷಿ ವಿದ್ಯಾ ಮಂದಿರದ ಮಾಲೀಕರೂ ಆಗಿದ್ದರು.
ಮಂಗಳವಾರ ಬೆಂಗಳೂರಿನಿಂದ ತರಬೇತಿ ಹಿನ್ನೆಲೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿಗೆ ತಮ್ಮ ಪತ್ನಿ (ಜ್ಞಾನಕ್ಷಿ ವಿದ್ಯಾಕೇಂದ್ರದ ಪ್ರಾಂಶುಪಾಲೆ) ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿತರೊಂದಿಗೆ ವಾಹನದಲ್ಲಿ ಬಂದಿದ್ದರು. ಬಳಿಕ ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ತಂಗಿದ್ದರು.
ಇಂದು ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿ, ವಾಪಸ್ ಬೆಂಗಳೂರಿಗೆ ಹೋಗುವುದಾಗಿ ನಿರ್ಧರಿಸಿದ್ದರು. ಆದರೆ ಬೆಳಗ್ಗೆ ವಸತಿಗೃಹದಲ್ಲಿದ್ದಾಗಲೇ ನರೇಂದ್ರ ಕುಮಾರ್ಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ವಾಹನದ ಮೂಲಕ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ನೇತ್ರಾವತಿ ಸಮೀಪ ಕೊನೆಯುಸಿರೆಳೆದಿದ್ದಾರೆ.
ನರೇಂದ್ರ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರಿನ ಐತಿಹಾಸಿಕ ದೊಡ್ಡ ಆಲದಮರದ ಬೃಹತ್ ಭಾಗ ಧರಾಶಾಹಿ