ಮಂಗಳೂರು: ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ- ವಾಸ್ಕೋ (ಗೋವಾ) ವಿಶೇಷ ಎಕ್ಸ್ಪ್ರೆಸ್ ರೈಲು ಮಾರ್ಚ್ 7 ರಂದು ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಡಲಿದೆ.
ಈ ರೈಲು ಸಂಚಾರ ಆರಂಭವಾಗುವ ಮೂಲಕ ಕರಾವಳಿ ಭಾಗದ ದಶಕದ ಬೇಡಿಕೆ ಈಡೇರಿದಂತಾಗಿದೆ. ಕಾಣಿಯೂರು ರೈಲ್ವೆ ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇದೆ ಎಂಬ ಮಾಹಿತಿ ಲಭಿಸಿದೆ. ಬರೋಬ್ಬರಿ 24 ವರ್ಷಗಳ ನಂತರ ಎಕ್ಸ್ಪ್ರೆಸ್ ರೈಲು ಕಾಣಿಯೂರಿನಲ್ಲಿ ನಿಲುಗಡೆಯಾಗುತ್ತಿರುವುದು ಇಲ್ಲಿನ ಜನತೆಗೆ ಬಹಳಷ್ಟು ಖುಷಿ ತಂದಿದೆ. ಅದೇ ರೀತಿ ನೂತನ ಕಡಬ ತಾಲೂಕಿನ ಪಕ್ಕದಲ್ಲಿರುವ ಕೋಡಿಂಬಾಳದಲ್ಲಿ ನಿಲುಗಡೆ ಕಲ್ಪಿಸಿಲ್ಲ ಎಂಬ ಬೇಸರವೂ ಕಡಬದ ಜನತೆಗಿದೆ.
ಈಗ ಹೊಸ ರೈಲಿನ ಹೊಸ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಶನಿವಾರ ಮಧ್ಯರಾತ್ರಿ ಸುಮಾರು 1.45 ಕ್ಕೆ ಕಾಣಿಯೂರು ರೈಲು ನಿಲ್ದಾಣ ತಲುಪಲಿದೆ. ನಿಲ್ದಾಣದಲ್ಲಿ ಹೊಸ ರೈಲು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಗಣೇಶ್ ಉದುನಡ್ಕ ತಿಳಿಸಿದ್ದಾರೆ.