ಬೆಳ್ತಂಗಡಿ: ಮಾದಕ ವಸ್ತುಗಳ ಜಾಲ ದೇಶವ್ಯಾಪಿ ಹಬ್ಬುತ್ತಿರುವ ನಡುವೆಯೇ ಇದರ ನಿರ್ಮೂಲನೆಗೆ ಜಾಗೃತಿ ಮೂಡಿಸುವ ಜೊತೆಗೆ ಹೋರಾಟಗಳನ್ನು ಸಂಘಟಿಸಿ ಮಾದಕ ವ್ಯಸನ ಮುಕ್ತ ಕಾಲೇಜು ಕ್ಯಾಂಪಸ್‌ಗಳನ್ನು ಮಾಡಿದ ಕೀರ್ತಿ ವಿದ್ಯಾರ್ಥಿ ಪರಿಷತ್‌ಗೆ ಸಲ್ಲಬೇಕು. ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಬಂದಲ್ಲಿ ರಾಜಿ ಇಲ್ಲದ ಹೋರಾಟ ನಡೆಸಿದೆ ಎಂದು ಶಾಸಕ ಹರೀಶ್ ಪೂಂಜ ಅಭಿನಂದಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿನಿಮಾದ ಹೆಸರಲ್ಲಿ ತಾರೆಯರು ನಡೆಸುತ್ತಿರುವ ಡ್ರಗ್ಸ್ ಜಾಲದ ತನಿಖೆಗೆ ಈ ಹಿಂದೆ ಯಾವುದೇ ಸರ್ಕಾರ ಮುಂದಾಗಿರಲಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಿನಿಮಾರಂಗವನ್ನು ತನಿಖೆಗೊಳಪಡಿಸಿ ಇತಿಹಾಸ ಸೃಷ್ಟಿಸಿದೆ. ಪ್ರಭಾವಿಗಳು ಸಿನಿತಾರೆಯರನ್ನು ಮುಂದಿಟ್ಟು ಯುವಶಕ್ತಿಯ ಮನಸ್ಸನ್ನು ಕದಡುವ ಕೆಲಸವಾಗುತ್ತಿದೆ. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುವ ಕೆಲಸಮಾಡಲಿದೆ. ವಿದ್ಯಾರ್ಥಿ ಸಮುದಾಯ ಡ್ರಗ್ಸ್ ಪೆಡ್ಲರ್ ಗಳ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ನೀಡಬೇಕು. ಡ್ರಗ್ಸ್ ಜಾಲದ ಕುರಿತು ತಕ್ಷಣ ಕ್ರಮಕೈಗೊಳ್ಳುವಂತೆ ಕ್ಷೇತ್ರದ ಎಲ್ಲಾ ಠಾಣೆಗಳು ಸೂಚನೆ ನೀಡುವುದಾಗಿ ತಿಳಿಸಿದರು.
ಬಳಿಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಬೇಕೆಂಬ ವಾತಾವರಣ ನಿರ್ಮಾಣವಾದಾಗ ವಿದ್ಯಾರ್ಥಿ ಸಮುದಾಯ ಆಯಾ ಕಾಲದಲ್ಲಿ ಧ್ವನಿ ಎತ್ತಿದೆ. ಎಬಿವಿಪಿ ಯವೇ ಜ್ಞಾನ ಶೀಲ ಏಖತೆ, ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ದೇಶಕ್ಕೆ ಕಂಟಕವಾಗಿರುವ ಡ್ರಗ್ಸ್ ಜಾಲದ ನಿರ್ಮೂಲನೆಗೆ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ, ಧರ್ಮಸ್ಥಳ ಠಾಣಾ ಉಪನಿರೀಕ್ಷಕ ಪವನ್ ನಾಯಕ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ, ವಕೀಲ ಯತೀಶ್ ಶೆಟ್ಟಿ, ಎಬಿವಿಪಿ ವಿಭಾಗ ಸಂಚಾಲಕ ಆಶೀಷ್ ಅಜ್ಜಿಬೆಟ್ಟು, ಎಬಿವಿಪಿ ಬೆಳ್ತಂಗಡಿ ನಗರ ಕಾರ್ಯದರ್ಶಿ ಸುಮಂತ್, ಎಬಿವಿಪಿ ಪ್ರಮುಖರಾದ ಪ್ರಥ್ವಿಶ್, ಶರತ್ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಪ್ರಜ್ವಲ್, ಜಗದೀಶ್, ವಿನೋದ್ ರಾಜ್, ತೀಕ್ಷಿತ್ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರು ಸಹಿ ಹಾಕುವ ಮೂಲಕ ಎಬಿವಿಪಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.