ಬೆಳ್ತಂಗಡಿ (ದಕ್ಷಿಣ ಕನ್ನಡ): ಲಾಕ್ಡೌನ್ ಮತ್ತೆ ಮತ್ತೆ ಮುಂದುವರೆಯುತ್ತಿದ್ದು ಬಹಳಷ್ಟು ಜನರು ಮಾನಸಿಕವಾಗಿ ನೊಂದಿದ್ದಾರೆ. ಇನ್ನು ಕೈಯ್ಯಲ್ಲಿ ಕೆಲಸವಿಲ್ಲ, ಮನೆಯಲ್ಲಿ ದಿನಸಿ ಇಲ್ಲ, ಹೊಟ್ಟೆ ತುಂಬಾ ಊಟ ಇಲ್ಲ ಎನ್ನುವಂತಾಗಿದೆ ಕೆಲವರ ಪರಿಸ್ಥಿತಿ.
ಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ಸೇರಿದಂತೆ ಕೆಲವೊಂದು ಸಂಘಸಂಸ್ಥೆಗಳು, ಸೆಲಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ಮನೆ ಮಾಲೀಕರು ಬಾಡಿಗೆದಾರರಿಂದ ಬಲವಂತವಾಗಿ ಬಾಡಿಗೆ ವಸೂಲಿ ಮಾಡಬಾರದು ಎಂದು ಕೂಡಾ ಸರ್ಕಾರ ಸೂಚಿಸಿತ್ತು. ಆದರೆ ಇಲ್ಲೊಬ್ಬರು ಪುಣ್ಯಾತ್ಮ ಬಾಡಿಗೆದಾರರ ತಿಂಗಳ ಬಾಡಿಗೆಯನ್ನೇ ಮನ್ನಾ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ಧಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಕುಂಟಿನಿ ನಿವಾಸಿ ಕೆ. ಸೂಫಿ ಹಾಜಿ ಅತ್ತಾಜೆ ಎಂಬುವವರ ಪುತ್ರ ಯು.ಎ.ಕುಂಙಿ ಮುಹಮ್ಮದ್ ಸಯದ್ ಎಂಬುವವರೇ ತಮ್ಮ ಎರಡು ಕಟ್ಟಡಗಳಲ್ಲಿ ನೆಲೆಸಿರುವ ಸುಮಾರು 12 ಕುಟುಂಬಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಮುಹಮ್ಮದ್ ಸಯದ್ ಸದ್ಯಕ್ಕೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು ತಮ್ಮ ಬಾಡಿಗೆದಾರರ ಬಾಡಿಗೆಯನ್ನು ಮನ್ನಾ ಮಾಡಿರುವುದಾಗಿ ತಿಳಿಸಿದ್ದಾರೆ. ಮುಹಮ್ಮದ್ ಅವರ ಈ ನಿರ್ಧಾರಕ್ಕೆ ಬಾಡಿಗೆದಾರರು ಸಂತೋಷ ವ್ಯಕ್ತಪಡಿಸಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.