ಮಂಗಳೂರು: ಯೋಗ ಮಾಡುವ ವೇಳೆ ನಿಯಂತ್ರಣ ತಪ್ಪಿ ಜಾರಿ ಬಿದ್ದು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದು, ನಿನ್ನೆ ರಾತ್ರಿಯಿಂದಲೇ ಆರಂಭಿಸಲಾಗಿದೆ.
ಆದಿತ್ಯವಾರ ಯೋಗ ಮಾಡುವ ವೇಳೆ ಜಾರಿ ಬಿದ್ದಿದ್ದರು. ಈ ವೇಳೆ, ಯಾವುದೇ ಗಾಯಗಳಾಗದೇ ಇರುವುದರಿಂದ ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಅದೇ ದಿನ ಅವರು ಡಯಾಲಿಸಿಸ್ ಚಿಕಿತ್ಸೆಗೆಂದು ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಪರೀಕ್ಷಿಸಿದಾಗ ಅವರ ತಲೆಯ ಒಳಭಾಗದಲ್ಲಿ ನರಕ್ಕೆ ಗಾಯವಾಗಿ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿತ್ತು. ಮರುದಿನ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಡಯಾಲಿಸಿಸ್ ಮಾಡಲು ಸಾಧ್ಯವಾಗಿರಲಿಲ್ಲ.
ನಿನ್ನೆ ಕೈ ಯಲ್ಲಿ ಚಲನೆ ಕಂಡು ಬಂದಿದ್ದು, ವೈದ್ಯರು ಅವರಿಗೆ ಡಯಾಲಿಸಿಸ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ನಿನ್ನೆ ಒಂದು ಹಂತದ ಡಯಾಲಿಸಿಸ್ ನಡೆದಿದ್ದು ಇಂದು ಕೂಡ ನಡೆಯಲಿದೆ.
ಡಿಕೆಶಿ ಭೇಟಿ : ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಐದು ಜಿಲ್ಲೆಗಳ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಆಸ್ಕರ್ ಅವರ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ದೂರವಾಣಿ ಕರೆ : ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ವಿಚಾರಿಸಿ ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ಅವರು ಕುಟುಂಬಿಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕೂಡ ದೂರವಾಣಿಯಲ್ಲಿ ಆರೋಗ್ಯ ವಿಚಾರಣೆ ಮಾತನಾಡಿದ್ದರು.