ಮಂಗಳೂರು: ರೂಪಾಂತರಿತ ಕೊರೊನಾ ತೀವ್ರವಾಗಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಬೀಚ್ ಪ್ರವೇಶಿಸುವುದನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ.ರಾಜೇಂದ್ರ.ಕೆ.ವಿ ನಿಷೇಧಿಸಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿರ್ದೇಶನದಂತೆ, ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬ್ರಿಟನ್ನಿಂದ ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿರುವ ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಹೊಸ ವರ್ಷ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕಡಲ ತೀರ ಪ್ರದೇಶಗಳಲ್ಲಿ ಅತೀ ಹೆಚ್ಚು ಜನಸಂದಣಿ ಸೇರುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: 1 ವರ್ಷದ ಮಗುವನ್ನು ಅನಧಿಕೃತವಾಗಿ ತಂದು ಸಾಕಿದ ಮಹಿಳೆ ; 2 ವರ್ಷದ ಬಳಿಕ ದೂರು ದಾಖಲು
ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್‍ಗಳಿಗೆ ಹಾಗೂ ಎಲ್ಲಾ ಕಡಲ ಕಿನಾರೆಗಳಿಗೆ ಡಿಸೆಂಬರ್ 31ರ ಮಧ್ಯಾಹ್ನ 12ರಿಂದ ಜನವರಿ 2ರ ಮಧ್ಯಾಹ್ನ 12 ಗಂಟೆಯವರೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ತಡೆಹಿಡಿಯಲಾಗಿದೆ.
ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಬೇರೆಯವರು ಪ್ರವೇಶಿಸುವುದನ್ನು ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 34ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.