ಬಂಟ್ವಾಳ: ಸಜೀಪಪಡು ಗ್ರಾಮದ ಸೇನರಬೆಟ್ಟು ನಿವಾಸಿಯಾದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ಫೆಬ್ರವರಿ 14ರಂದು ನಡೆದಿದ್ದು ಮಹಿಳೆಯ ಸಾವಿನ ಬಗ್ಗೆ ಆಕೆಯ ಪತಿ ಸಂಶಯ ವ್ಯಕ್ತಪಡಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ. ಇಲ್ಲಿನ ನಿವಾಸಿ ಸತೀಶ್ ಪಿ. ಎಂಬವರ ಪತ್ನಿ ಬೀನಾ ಸಿ. ಕಳೆದ ಫೆಬ್ರವರಿ ತಿಂಗಳ 14ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಮಹಿಳೆಯ ಕಿವಿಯಲ್ಲಿ ಇಯರ್ ಫೋನ್ ಇದ್ದು ಆಕೆಯ ಮೊಬೈಲ್ ಫೋನ್ ಕಾಲಿನ ಕೆಳಗಡೆ ಬಿದ್ದಿದ್ದು ಆತ್ಮಹತ್ಯೆಯು ವ್ಯವಸ್ಥಿತ ಸಂಚು ಎಂಬ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಮಹಿಳೆಯ ಪತಿ ಮಂಗಳೂರಿನಲ್ಲಿ ಕೆಲಸದಲ್ಲಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ಅವಿವಾಹಿತ ಯುವಕನೋರ್ವನ ಪರಿಚಯವಾಗಿತ್ತು. ಯುವಕ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ 10 ದಿನಗಳ ಮೊದಲು ಸ್ನೇಹಿತನ ಮೊಬೈಲ್‌ನಿಂದ ಆಕೆಯ ತಾಯಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದು ಆ ದಿನ ಬೀನಾ ಅವರನ್ನು ಅವರ ತಾಯಿ ವಿಚಾರಿಸಿದಾಗ ಯುವಕ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುರುವುದಾಗಿ ತಿಳಿಸಿದ್ದರು.
ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದಿನವೂ ಯುವಕ ಮೃತಳ ತಾಯಿಗೆ ಫೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದಾನೆ. ಘಟನೆಯ ಬಳಿಕ ಮನೆಯನ್ನು ಶೋಧಿಸಿದಾಗ ಯುವಕನ ಬ್ಯಾಂಕ್ ಪಾಸ್ ಪುಸ್ತಕಸಹಿತ ಅನುಮಾನಾಸ್ಪದ ವಸ್ತುಗಳು ಮನೆಯಲ್ಲಿ ದೊರೆತಿದ್ದು ಮಹಿಳೆಯ ಸಾವಿನ ಹಿಂದೆ ಸಂಶಯವಿದ್ದು ಆತ್ಮಹತ್ಯೆಗೆ ಯುವಕ ಪ್ರಚೋದನೆ ನೀಡಿದ್ದಾನೆ ಎನ್ನುವ ಆರೋಪವನ್ನು ಮೃತ ಮಹಿಳೆಯ ಪತಿ ಮಾಡಿದ್ದಾರೆ. ಘಟನೆ ನಡೆದು ಸುಮಾರು 20 ದಿನಗಳ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಸಾವಿಗೆ ನ್ಯಾಯ ಒದಗಿಸುವಂತೆ ಪತಿ ಹಾಗೂ ಮಹಿಳೆಯ ಸೋದರ ಬಂಧುಗಳು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ನವ ವಿವಾಹಿತೆ ಆತ್ಮಹತ್ಯೆ ಪ್ರಕರಣ.. ಪತಿ ಸೇರಿ ಸೇರಿ ಏಳು ಮಂದಿ ವಿರುದ್ಧ ದೂರು ದಾಖಲು
ನವ ವಿವಾಹಿತೆ ಆತ್ಮಹತ್ಯೆ: ಮೈಸೂರಿನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ನವ ವಿವಾಹಿತ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಗಂಡ ಹಾಗೂ ಕುಟುಂಬಸ್ಥರ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ವಾಸವಿದ್ದ ಶ್ಯಾನುಬೋಗನಹಳ್ಳಿಯ ಮಹಿಳಾ ಲೆಕ್ಕಾಧಿಕಾರಿ ಕೃಷ್ಣ ಬಾಯಿ ತುಕಾರಾಂ ಪಡ್ಕೆ (25) ಎಂಬುವರು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಸಿದ್ದಾಪುರದ ವ್ಯಕ್ತಿ ಆತ್ಮಹತ್ಯೆ