ಬಂಟ್ವಾಳ (ದ.ಕ): ಕೊರೊನಾದ ಒಟ್ಟು 9 ಪ್ರಕರಣಗಳು ದಾಖಲಾಗಿರುವ ಬಂಟ್ವಾಳ ಪೇಟೆಯಲ್ಲಿ ಸೀಲ್ ಡೌನ್ ವ್ಯಾಪ್ತಿಯನ್ನು ಕಿರಿದುಗೊಳಿಸಬೇಕು ಎಂದು ಒತ್ತಾಯಿಸಿ, ಈ ವ್ಯಾಪ್ತಿಯ ನಾಗರಿಕರು ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾದ ಬಂಟ್ವಾಳ ರಥಬೀದಿಯನ್ನು ಸೀಲ್ ಡೌನ್ ನಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಹಠಾತ್ ಪ್ರತಿಭಟನೆ ನಡೆದಿದೆ. ಪುರಸಭೆ ಸದಸ್ಯ ಎ. ಗೋವಿಂದ ಪ್ರಭು ನೇತೃತ್ವದಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪ್ರತಿಭಟನೆ ನಡೆದಿದ್ದು, ಮಹಿಳೆಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ಸೀಲ್ ಡೌನ್ಗೆ ಗುರುತಿಸಲಾದ ನಕ್ಷೆಯೇ ಸರಿ ಇಲ್ಲ ಎಂದು ವಾದಿಸಿದರು.
ಬಳಿಕ ತಹಸೀಲ್ದಾರ್ ಸಂಜೆಯ ಬಳಿಕ ಮುಕ್ತಗೊಳಿಸುವ ಕುರಿತು ಸ್ಪಷ್ಟನೆ ನೀಡುವುದಾಗಿ ತಿಳಿಸಿದರು. ರಥಬೀದಿ ಸೀಲ್ ಡೌನ್ 32 ದಿನಗಳು ಕಳೆದಿದ್ದು, ಅವೈಜ್ಞಾನಿಕವಾಗಿ ಸೀಲ್ ಡೌನ್ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶಾಸಕರ ಪ್ರತಿಕ್ರಿಯೆ:
ಬಂಟ್ವಾಳದಲ್ಲಿ ಸೀಲ್ ಡೌನ್ ನಿಗದಿಯಾಗಿರುವ ಜಾಗದ ತೆರವಿನ ವಿಚಾರದ ಕುರಿತು ಶಾಸಕ ರಾಜೇಶ್ ನಾಯ್ಕ್ ಪ್ರತಿಕ್ರಿಯೆ ನೀಡಿ, ಬುಧವಾರ ರಾತ್ರಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ ಎಂದರು. ಗುರುವಾರ ಬೆಳಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಅವರಿಗೂ ವಿಷಯ ತಿಳಿಸಲಾಗಿದೆ. ಸೀಲ್ಡೌನ್ ಸಡಿಲಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸರಕಾರದ ಮಟ್ಟದಲ್ಲಿ ಪ್ರಯತ್ನಗಳು ಮಾಡುತ್ತಿದ್ದೇನೆ. ತಹಶೀಲ್ದಾರ್ ಹಾಗೂ ಟಿಎಚ್ಒ ಅವರ ಪ್ರಸ್ತಾವನೆಯ ಆಧಾರದಲ್ಲಿ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಅಲ್ಲದೇ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳದಲ್ಲಿ ಸೀಲ್ ಡೌನ್ ಜಾಗ ತೆರವುಗೊಳಿಸುವ ಕುರಿತು ಪ್ರತಿಭಟನೆ ನಡೆಯುತ್ತಿದ್ದು, ಮೇಲಧಿಕಾರಿಗಳು ಪರಿಶೀಲಿಸಿ ನಿರ್ದಿಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದರು.