ಪುತ್ತೂರು: ಬ್ಯಾಂಕ್‌ಗಳು ಯಾವುದೇ ನೆಪ ಹೇಳದೆ ಸಣ್ಣ-ಪುಟ್ಟ ವ್ಯಾಪಾರ ವ್ಯವಹಾರ ನಡೆಸುವವರಿಗೆ ಆದ್ಯತೆ ಮೇಲೆ ಸಾಲ ಸೌಲಭ್ಯ ಒದಗಿಸಿಕೊಡುವ ಮೂಲಕ ಪ್ರಧಾನಿ ಮೋದಿಯವರ ಸ್ಕಿಲ್ ಇಂಡಿಯಾ ಯೋಜನೆಯ ಆಶಯ ಸಾಕಾರಗೊಳ್ಳಲು ಸಹಕರಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ನಗರದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯ ನಾನು ಕೂಡ ಡಿಜಿಟಲ್ ಎಂಬ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ವ್ಯಾಪಾರ ವ್ಯವಹಾರಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡರೆ ಬ್ಯಾಂಕ್‌ಗಳಿಗೆ ಠೇವಣಿ ಹೆಚ್ಚಾಗಿ ಹರಿದು ಬರಲಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಹಜವಾಗಿಯೇ ಸಾಲ ಕೊಡಲು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.
ಈ ಹಿನ್ನೆಲೆ ಬ್ಯಾಂಕ್‌ಗಳು ಸಾಲ ನೀಡುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ, ಮಾನವೀಯ ನೆಲೆಯಲ್ಲಿ ಬಡ ವರ್ಗದವರ ವಹಿವಾಟುಗಳಿಗೆ ನೆರವು ನೀಡಲು ಮುಂದಾಗಬೇಕು. ಪ್ರಸ್ತುತ ದೇಶದ ನಗರ ಪ್ರದೇಶ ವ್ಯಾಪ್ತಿ ಶೇ. 40ರಷ್ಟು ವಿಸ್ತರಣೆಗೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗಕ್ಕೆ ಕಡಿವಾಣ ಹಾಕಲು ಬ್ಯಾಂಕ್‌ಗಳು ಸ್ವಉದ್ಯೋಗಕ್ಕೆ ಹೆಚ್ಚಿನ ನೆರವು ನೀಡಲು ಬದ್ಧವಾಗಬೇಕು. ಈ ಮೂಲಕ ಸ್ವಾವಲಂಬಿ ಭಾರತದ ಕನಸು ನನಸು ಮಾಡಬೇಕಾಗಿದೆ ಎಂದರು.