ಮಂಗಳೂರು: ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಬ್ಯಾಂಕ್ ಅಧಿಕಾರಿ ವಾದಿರಾಜ್(55) ಆತ್ಮಹತ್ಯೆ ಮಾಡಿಕೊಂಡವರು. ವಾದಿರಾಜ್ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯವರು ಬಂದು ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ವಾದಿರಾಜ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಬೆಳಗ್ಗೆ ಮಕ್ಕಳು ಕಾಲೇಜಿಗೆ ತೆರಳಿದ್ದರು. ಪತ್ನಿ ಕೂಡಾ ಮನೆಯಲ್ಲಿ ಇಲ್ಲದ ವೇಳೆ ಅವರು ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ.. ಹನಿಟ್ರ್ಯಾಪ್ ಆರೋಪದ ಕುರಿತು ಪೊಲೀಸರಿಂದ ತನಿಖೆ ಇದನ್ನೂ ಓದಿ: ಮಂಡ್ಯ: ಬ್ಯಾಂಕ್ ದರೋಡೆಗೆ ಬಂದು ಸೆಕ್ಯೂರಿಟಿ ಗಾರ್ಡ್ಗೆ ಚಾಕು ಇರಿದು ಪರಾರಿ |
ಪ್ರತ್ಯೇಕ ಪ್ರಕರಣ - ಮಾಜಿ ಸೈನಿಕ ಆತ್ಮಹತ್ಯೆ: ಮಡಿಕೇರಿಯಲ್ಲಿ ಡೆತ್‌ನೋಟ್ ಬರೆದಿಟ್ಟು ಮಂಗಳವಾರ ನಾಪತ್ತೆಯಾಗಿದ್ದ ಮಾಜಿ ಸೈನಿಕ ಸಂದೇಶ್ (38) ಅವರ ಮೃತದೇಹ ನಗರದ ಪಂಪಿನ ಕೆರೆಯಲ್ಲಿ ಬುಧವಾರ ಪತ್ತೆಯಾಗಿದೆ. ಜಿಲ್ಲಾ ಪೊಲೀಸರು ಸತತ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆಸಿದ್ದಾರೆ.
ಮನೆಯಲ್ಲಿ ಡೆತ್‌ನೋಟ್ ಮತ್ತು ಕೆರೆಯ ದಂಡೆಯಲ್ಲಿ ಅವರ ಚಪ್ಪಲಿ ಮತ್ತು ವಾಚ್ ಪತ್ತೆಯಾಗಿದ್ದವು. ಈ ಹಿನ್ನೆಲೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಸ್ಥಳೀಯ ಮುಳುಗುತಜ್ಞರು ಶೋಧ ನಡೆಸಿದರೂ ಸುಳಿವು ಲಭಿಸದ ಕಾರಣ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಲಾಗಿತ್ತು. ಬುಧವಾರ ರಾತ್ರಿ 8.20ರ ಸುಮಾರಿಗೆ 40 ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ. ಸಂದೇಶ್ ತಮ್ಮ ಡೆತ್‌ನೋಟ್‌ನಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರ ಹೆಸರನ್ನು ಉಲ್ಲೇಖ ಮಾಡಿದ್ದು, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮಾರ್ಗದರ್ಶನದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಡೆತ್‌ನೋಟ್‌ನಲ್ಲಿ ಹೆಸರಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂದೇಶ್ ಸಂಬಂಧಿಕರು, ಗೆಳೆಯರು ಒತ್ತಾಯಿಸಿದ್ದಾರೆ.