ಬೆಳ್ತಂಗಡಿ: ಬಂಗಾರ ಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ (20) ಎಂಬುವರ ಶೋಧ ಕಾರ್ಯಾಚರಣೆಯನ್ನು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಬಂಗಾರಪಲ್ಕೆ ದುರ್ಘಟನೆ ನಡೆದ ಸ್ಥಳ ದುರ್ಗಮ ಪ್ರದೇಶವಾಗಿದ್ದು ವಾಹನಗಳು ತಲುಪುವುದು ಕಷ್ಟಕರವಾಗಿದೆ. ಆದರೂ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಶೇ 99ರಷ್ಟು ಕಾರ್ಯಾಚರಣೆ ಪೂರ್ಣಗೊಂಡಿದೆ. ಹೀಗಾಗಿ, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ನಿತ್ಯ ವರದಿ ನೀಡುತ್ತಿದ್ದರು. ಕೇವಲ ಒಂದರಷ್ಟು ಮಾತ್ರ ಭರವಸೆ ಉಳಿದಿದೆ. ಕೊನೆಯ ಪ್ರಯತ್ನ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದರು.
ಕಾಣೆಯಾದ ಸನತ್ ಪೋಷಕರ ಜೊತೆ ಮಾತನಾಡಲಾಗಿದೆ. ಅಕ್ರಮ ಹೋಮ್ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಸಾರ್ವಜನಿಕರು, ಅಧಿಕಾರಿಗಳು ಭಗೀರಥ ಪ್ರಯತ್ನ ನಡೆಸಿದರೂ ಕಾಣೆಯಾದ ಸನತ್ ದೇಹ ಸಿಗದಿರುವುದು ದುರದೃಷ್ಟಕರ. ಯಾಂತ್ರಿಕ ಕಾರ್ಯಾಚರಣೆಯಿಂದಲೂ ಫಲ ಸಿಗುತ್ತಿಲ್ಲ. ಮುಂದಿನ ಕಾರ್ಯಾಚರಣೆ ಕುರಿತು ಅಂತಿಮ ನಿರ್ಧಾರ ಶೀಘ್ರವೇ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ರಿಷಿಗಂಗಾ ನದಿ ಮುಂಭಾಗ ಸರೋವರ ಸೃಷ್ಟಿ: ಮತ್ತೊಂದು ಅನಾಹುತದ ಮುನ್ಸೂಚನೆ?
ಭೇಟಿ ವೇಳೆ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ಜೈನ್ ಅವರು ಜಿಲ್ಲಾಧಿಕಾರಿಗಳಿಗೆ ಕಾರ್ಯಾಚರಣೆಯ ಮಾಹಿತಿ ನೀಡಿದರು. ಪುತ್ತೂರು ಎ.ಸಿ. ಡಾ. ಯತೀಶ್ ಉಳ್ಳಾಲ್, ಬೆಳ್ತಂಗಡಿ ತಹಶೀಲ್ದಾರ್ ಜೆ. ಮಹೇಶ್ , ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಬೆಳ್ತಂಗಡಿ ವೃತ್ತನಿರೀಕ್ಷಕ ಪಿ.ಜಿ. ಸಂದೇಶ್, ಅಗ್ನಿಶಾಮಕ ದಳದ ಸಿಬ್ಬಂದಿ ಮಲವಂತಿಗೆ, ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ದಿನೇಶ್ ಗೌಡ ಇತರರು ಇದ್ದರು.