ಮಂಗಳೂರು: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಯ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಉಗ್ರರ ಪರ ಬರಹ ಬರೆದ ಮತ್ತಿಬ್ಬರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಕಾರಾಗೃಹದಿಂದ ಬಿಡುಗಡೆ ಹೊಂದಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್‌ಗೆ ಬಂಧಿತನಾಗಿ ಎರಡು ತಿಂಗಳಿನಲ್ಲಿ ಮಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿತ್ತು. ಜಾಮೀನು ದೊರೆಯದೆ ಕಾರಾಗೃಹದಲ್ಲಿದ್ದ ಇನ್ನಿಬ್ಬರು ಆರೋಪಿಗಳಾದ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೇನ್ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.
2020 ನ.27ರಂದು ಕದ್ರಿ ಠಾಣೆಯ ಬಳಿ ಬಿಜೈ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಈ ಬರಹ ಕಂಡು ಬಂದಿತ್ತು. ಈ ಗೋಡೆ ಬರಹದಲ್ಲಿ 'ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಸೇರುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್, ತಾಲಿಬಾನ್ ಜಿಂದಾಬಾದ್’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು.
ಈ ಗೋಡೆ ಬರಹ ಪ್ರಕರಣ ತಲ್ಲಣ ಸೃಷ್ಟಿಸುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಬಂದು ಆರೋಪಿಗಳ ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಯಾವುದೇ ಉಗ್ರರೊಂದಿಗೆ ನಂಟು ಇಲ್ಲ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಕಳುಹಿಸಿದ್ದರು.
ಆರೋಪಿಗಳಿಗೆ ಬರಹ ಬರೆಯುವುದಕ್ಕೆ ಪ್ರೇರಣೆ ನೀಡಿದ್ದು ಅರಾಫತ್ ಅಲಿ ಎನ್ನುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಅರಾಫತ್ ಅಲಿ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆಯೇ ಸೌದಿ ಅರೇಬಿಯಾಕ್ಕೆ ತೆರಳಿದ್ದ.
ಗೋಡೆ ಬರಹದಲ್ಲಿ ಯಾವ ರೀತಿಯ ವಿಷಯ ಇರಬೇಕೆಂದು ಹೇಳಿದ್ದಲ್ಲದೆ, ಹೀಗೆಯೇ ಬರೆಯುವಂತೆ ಸೂಚಿಸಿದ್ದು ಅರಾಫತ್ ಅಲಿ ಎನ್ನುವ ವಿಚಾರವನ್ನು ವಿಚಾರಣೆ ವೇಳೆ ಬಾಯ್ದಿಟ್ಟಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.