ಕಡಬ (ದಕ್ಷಿಣ ಕನ್ನಡ): ಕಡಬದ ಕೋಡಿಂಬಾಳಯಲ್ಲಿ ಕಳೆದ ವರ್ಷ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಜಯಾನಂದ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ತನ್ನ ಸ್ವಂತ ನಾದಿನಿಗೆ ಮತ್ತು ಪುಟ್ಟ ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆಸಿ ಜೈಲಿನಲ್ಲಿದ್ದ ಈತ ಜಾಮೀನು ಮೇಲೆ ಹೊರ ಬಂದಿದ್ದ.
ಬಳಿಕ ಈ ಜಾಮೀನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಹೈಕೋರ್ಟ್ ಜಾಮೀನು ನೀಡಿರುವುದನ್ನು ತಿರಸ್ಕರಿಸಿ ಆತನನ್ನು ಕೂಡಲೇ ಬಂಧಿಸುವಂತೆ ಆದೇಶಿಸಿತ್ತು.
ಈ ಆದೇಶ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಆರೋಪಿ ಜಯಾನಂದ್ ಸುಪ್ರೀಂಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ. ಈ ಹಿನ್ನೆಲೆ ಆರೋಪಿ ಇದೀಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಏನಿದು ಪ್ರಕರಣ?: 2020ನೇ ಜನವರಿ 24ರಂದು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ಜಯಾನಂದ್ ತನ್ನ ತಮ್ಮನ ಹೆಂಡತಿ ಸ್ವಪ್ನಾ ಎಂಬುವರಿಗೆ ಮತ್ತು ಅವರ ಜೊತೆಗಿದ್ದ ಪುಟ್ಟ ಮಗುವಿನ ಮೇಲೆ ಆ್ಯಸಿಡ್ ಎರಚಿದ್ದ.
ಇದರಿಂದ ಸ್ವಪ್ನಾ ಹಾಗೂ ಅವರ ಮಗುವಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಜಯಾನಂದ್‌ಗೆ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿತ್ತು.
ಆದರೆ, ಈ ಜಾಮೀನನ್ನು ಪ್ರಶ್ನಿಸಿ ಸ್ವಪ್ನಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಜಾಮೀನು ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಜಯಾನಂದನನ್ನು ಬಂಧಿಸುವಂತೆ ಕಡಬ ಪೊಲೀಸರಿಗೆ ಆದೇಶಿಸಿತ್ತು.
ಈ ಮಧ್ಯೆ ಆರೋಪಿ ಜಯಾನಂದ್ ತಲೆಮರೆಸಿಕೊಂಡಿದ್ದ. ಇದೀಗ ಜಯಾನಂದ್ ನೇರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಜಯಾನಂದ್‌ನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ: ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ.. 'ನೋ ಕಮೆಂಟ್ಸ್'ಎಂದ ಬೊಮ್ಮಾಯಿ