ಮಂಗಳೂರು: ಲಾಕ್‌ಡೌನ್ ಸಂದರ್ಭ ಮಂಗಳೂರಿನಲ್ಲಿ ಪಿಜಿಯಿಂದ ಹೊರಬಿದ್ದು ಮನೆಗೂ ತೆರಳಲಾಗದೆ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಕೇರಳದ ಮೂವರು ವಿದ್ಯಾರ್ಥಿನಿಯರಿಗೆ ತಮ್ಮ ವಾಸದ ಮನೆಯನ್ನೇ ಉದಾರವಾಗಿ ಬಿಟ್ಟುಕೊಟ್ಟು ಬದ್ರುದ್ದೀನ್ ಕಲಾಯಿ ಎಂಬುವರು ಮಾನವೀಯತೆ ಮೆರೆದಿದ್ದಾರೆ.
ಕೇರಳದ ತ್ರಿಶ್ಶೂರ್, ಪಾಲಕ್ಕಾಡ್, ಕೋಝಿಕ್ಕೋಡ್ ಜಿಲ್ಲೆಯ ನಿವಾಸಿಗಳಾದ ಆದಿರಾ, ನಿಲೋಫರ್, ಸೋನಿಯಾ ಎಂಬ ವಿದ್ಯಾರ್ಥಿನಿಯರು ಮಂಗಳೂರಿನ ಬಲ್ಲಾಳ್ ಬಾಗ್ನ ಖಾಸಗಿ ಕಾಲೇಜೊಂದರಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದರು. ಪಿಜಿಯೊಂದರಲ್ಲಿ ತಂಗಿದ್ದ ಇವರಿಗೆ ಲಾಕ್‌ಡೌನ್ ಸಂದರ್ಭ ಊಟ, ತಿಂಡಿಯ ಸಮಸ್ಯೆಯೊಂದಿಗೆ ಪಿಜಿಯನ್ನೂ ಖಾಲಿ ಮಾಡಬೇಕಾದ ಪರಿಸ್ಥಿತಿ ಒದಗಿತ್ತು. ಇದರಿಂದ ಸಂಕಷ್ಟಕ್ಕೊಳಗಾದ ತ್ರಿಶ್ಶೂರ್ನ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಈ ವಿಷಯ ತಿಳಿಸಿದ್ದಾಳೆ.
ತಕ್ಷಣ ಆಕೆಯ ತಂದೆ ತ್ರಿಶ್ಶೂರ್ ಎಸ್ಡಿಪಿಐ ನಾಯಕರ ಮೂಲಕ ಮಂಗಳೂರು ಎಸ್ಡಿಪಿಐ ನಾಯಕರನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭ ಮಂಗಳೂರು ಎಸ್ಡಿಪಿಐ ನಾಯಕರ ಸಲಹೆಯಂತೆ ಬದ್ರುದ್ದೀನ್ ಕಲಾಯಿ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾರೆ. ಆ ಸಂದರ್ಭದಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರೂ ಇದೇ ರೀತಿ ಸಂಕಷ್ಟಕ್ಕೊಳಗಾಗಿದ್ದರು. ವಿದ್ಯಾರ್ಥಿನಿಯರ ಸಮಸ್ಯೆಗೆ ತಕ್ಷಣಕ್ಕೆ ಏನೂ ಮಾಡಲು ವ್ಯವಸ್ಥೆ ಇರದ ಕಾರಣ ಬದ್ರುದ್ದೀನ್ ಸುಮಾರು ಒಂದೂವರೆ ತಿಂಗಳವರೆಗೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟು ಆಶ್ರಯ ನೀಡಿದ್ದಾರೆ.
ಮೂಲತಃ ಕಲಾಯಿ ನಿವಾಸಿಯಾಗಿರುವ ಬದ್ರುದ್ದೀನ್ ಪ್ರಸಕ್ತ ಮಂಗಳೂರಿನ ಕುದ್ರೋಳಿಯ ಜಾಮಿಯಾ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ವಾಸವಿದ್ದಾರೆ. ಅವರು ಆ ಮನೆಯನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಟ್ಟು ತನ್ನ ಪತ್ನಿ, ಮಕ್ಕಳೊಂದಿಗೆ ಕುದ್ರೋಳಿ ಅಳಕೆಯಲ್ಲಿರುವ ಹೆಂಡತಿಯ ತವರು ಮನೆಯಲ್ಲಿ ಲಾಕ್‌ಡೌನ್ ಮುಗಿಯುವವರೆಗೆ ತಂಗಿದ್ದರು.
ಮೊದಮೊದಲಿಗೆ ವಿದ್ಯಾರ್ಥಿನಿಯರಿಗೆ ಊಟವನ್ನೂ ಬದ್ರುದ್ದೀನ್ ಪತ್ನಿಯೇ ಒದಗಿಸುತ್ತಿದ್ದರು. ಬಳಿಕ ತಾವೇ ಅಡುಗೆ ಮಾಡುತ್ತೇವೆ ಎಂದು ಅವರು ಹೇಳಿದ ಬಳಿಕ ಅಡುಗೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಬದ್ರುದ್ದೀನ್ ಕಲಾಯಿಯವರೇ ಒದಗಿಸಿದ್ದಾರೆ. ಸುಮಾರು ಒಂದೂವರೆ ತಿಂಗಳು ಇವರ ಮನೆಯಲ್ಲಿಯೇ ಆಶ್ರಯ ಪಡೆದಿದ್ದ ಈ ಮೂವರು ವಿದ್ಯಾರ್ಥಿನಿಗಳಿಗೆ, ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯದ ಬಳಿಕ ಆನ್‌ಲೈನ್‌ನಲ್ಲಿ ಪಾಸ್ ಪಡೆದು ಕೇರಳಕ್ಕೆ ಕಳುಹಿಸುವ ವ್ಯವಸ್ಥೆಯನ್ನ ಬದ್ರುದ್ದೀನ್ ಮಾಡಿದ್ದರು.
ನಂತರ ಮೂವರು ವಿದ್ಯಾರ್ಥಿನಿಯರು ಮೇ 18-20ರ ಮಧ್ಯೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭ ವಿದ್ಯಾರ್ಥಿನಿಯರನ್ನು ಕಾಸರಗೋಡು-ದ.ಕ. ಗಡಿ ಭಾಗ ತಲಪಾಡಿಗೆ ಖುದ್ದು ಬದ್ರುದ್ದೀನ್ ಕಲಾಯಿಯವರೇ ಕರೆದುಕೊಂಡು ಹೋಗಿ ಬೀಳ್ಕೊಟ್ಟಿದ್ದಾರೆ. ವಿದ್ಯಾರ್ಥಿನಿಯರ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ ನೀಡಿದ ಬದ್ರುದ್ದೀನ್ ಕಲಾಯಿ ಅವರ ಮಾನವೀಯ ಸ್ಪಂದನೆಗೆ ಎಲ್ಲಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.