ಮಂಗಳೂರು: ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಆರ್ಟಿಎ ಸಭೆಯಲ್ಲಿ ರಿಕ್ಷಾ ಚಾಲಕರ ಅಹವಾಲನ್ನು ಆಲಿಸಿದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಆಟೋ ಪ್ರಯಾಣ ದರವನ್ನು 25 ರೂ.ಗಳಿಂದ 30ರೂ.ಗೆ ಏರಿಕೆ ಮಾಡಿದರು. ಪ್ರತೀ ಕಿ.ಮೀ.ಗೆ 13 ರೂ.ನಿಂದ 15 ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಘೋಷಿಸಿದರು.
ಈ ಬಗ್ಗೆ ರಿಕ್ಷಾ ಚಾಲಕರಲ್ಲೇ ಒಮ್ಮತದ ನಿರ್ಧಾರವಿಲ್ಲದೆ ಒಂದು ಸಂಘಟನೆಯವರು ಈ ದರ ಪರಿಷ್ಕರಣೆಯನ್ನು ಒಪ್ಪಿದರೂ ಮತ್ತೊಂದು ಸಂಘಟನೆಯವರು ಉಡುಪಿ ಮಾದರಿಯಲ್ಲೇ ಪ್ರತೀ ಕಿ.ಮೀ.ಗೆ 16 ರೂ. ಹೆಚ್ಚಳ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಉಡುಪಿಯಲ್ಲಿ ಕಳೆದ ಆರು ವರ್ಷಗಳಿಂದ ಆಟೋ ದರ ಪರಿಷ್ಕರಣೆ ಆಗಿಲ್ಲ. ಮಂಗಳೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿದೆ. ಮುಂದಕ್ಕೆ ಇದೇ ರೀತಿ ಸಭೆ ಕರೆದು ದರ ಪರಿಷ್ಕರಣೆಯನ್ನು ಆದಷ್ಟು ವೇಗವಾಗಿ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಆಟೋ ಚಾಲಕರು ತಮ್ಮ ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು. ದ.ಕ ಜಿಲ್ಲಾ ಸಾರಿಗೆ ಪ್ರಾಧಿಕಾರದಿಂದ ದಿನನಿತ್ಯ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿದೆ. ರಸ್ತೆ ಸರಿಯಿಲ್ಲ, ಟ್ಯಾಕ್ಸಿ, ಬೈಕ್ಗಳಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿದೆ. ರಿಕ್ಷಾ ತಂಗುದಾಣಗಳಿಲ್ಲ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಸಭೆಯ ಮುಂದೆ ನಿವೇದಿಸಿಕೊಂಡರು.
ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಮಾತನಾಡಿ, ಈಗಾಗಲೇ ಮಂಡಿಸಿದ ಹತ್ತು ಪ್ರಮುಖ ಸಮಸ್ಯೆಗಳನ್ನು ನಾವು ಪರಿಗಣಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.