ಉಳ್ಳಾಲ: ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿದ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳ ತಂಡವೊಂದು ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದ ಮೇಲಂಗಡಿ ಎಂಬಲ್ಲಿ ಭಾನುವಾರ ನಡೆದಿದೆ.
ಉಳ್ಳಾಲ ಮೇಲಂಗಡಿ ನಿವಾಸಿ ರಿಫಾಯಿಝ್ (25) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಉಳ್ಳಾಲ ನಿವಾಸಿ ಜಲ್ದಿ ಇರ್ಫಾನ್ ಮತ್ತು ಜುಲ್ವಾನ್ ಎನ್ನುವ ಅರೋಪಿಗಳ ತಂಡ ಈ ಕೃತ್ಯ ಎಸಗಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ರಿಫಾಯಿಝ್ ಮನೆ ಮುಂದೆ ಬಂದ ತಂಡ ಆತನ ಎಡ ಕಿವಿ ಹಾಗೂ ಎದೆ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ:
ರಿಫಾಯಿಝ್ ಜು.25 ರಂದು ಶನಿವಾರ ಉಳ್ಳಾಲ ದರ್ಗಾ ಬಳಿ ನಿಂತಿದ್ದ ಸಂದರ್ಭದಲ್ಲಿ ಕಡಪ್ಪುರ ನಿವಾಸಿ ಶಮೀರ್, ಅರ್ಫಾನ್ ಮತ್ತು ಇತರೆ ಆರು ಮಂದಿ ಸೇರಿಕೊಂಡು ನಿನ್ನನ್ನು ಮತ್ತು ಮನೆ ಮಂದಿಯನ್ನು ಕೊಲ್ಲುತ್ತೇವೆ. ಇಡೀ ಕುಟುಂಬವನ್ನೇ ಸರ್ವ ನಾಶ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಬಳಿಕ ರಿಫಾಯಿಝ್ ಅನ್ನು ಒತ್ತಾಯಪೂರ್ವಕವಾಗಿ ಕಾರಿನ ಬಳಿ ಕರೆದೊಯ್ದು ಅದರೊಳಗಿದ್ದ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆವೊಡ್ಡಿದ್ದಾರೆ.
ಈ ಕುರಿತು ರಿಫಾಯಿಝ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಮತ್ತೆ ಬೆದರಿಕೆ ಹಾಕಿ, ಕೊಲೆಗೆ ಯತ್ನಿಸಿದ್ದಾರೆ. ಈ ಹಿಂದೆಯೂ ದಾವೂದ್ ಮತ್ತು ಶಮೀರ್ ಎಂಬುವರ ತಂಡ ರಿಫಾಯಿಝ್ ಮನೆಗೆ ನುಗ್ಗಿ ದಾಳಿ ನಡೆಸಿ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿ ಮಾಡಿದ್ದರು.