ಸುಳ್ಯ (ದಕ್ಷಿಣ ಕನ್ನಡ): ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಕೆಲಸದವರು ಮನೆ ಒಡತಿಯನ್ನು ಕೊಲೆಗೆ ಯತ್ನಿಸಿ ಚಿನ್ನ ಹಾಗೂ ನಗದು ದರೋಡೆಗೆ ಪ್ರಯತ್ನಿಸಿದ್ದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಗುರುವಾರ ರಾತ್ರಿ ಈ ಕೃತ್ಯ ನಡೆದಿದೆ. ವರದರಾಜ್ (30), ಪಿ.ಪಿ ಪೌಲೋಸ್ ಎಂಬವರ ಪುತ್ರ ಸೈಜಾನ್ ಪಿ.ಪಿ (38) ಕೃತ್ಯ ಎಸಗಿದ ಆರೋಪಿಗಳು.
ವರದರಾಜ್ ಹಾಗೂ ಸೈಜಾನ್ ಎಂಬುವವರು ನಾಲ್ಕು ತಿಂಗಳುಗಳಿಂದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾರ್ಚ್ 2 ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಏಣಿಯ ಮೂಲಕ ಮನೆಯ ಮಹಡಿಯನ್ನು ಹತ್ತಿ ಮೇಲೆ ಬಂದಿದ್ದಾರೆ. ಮಹಡಿಯಲ್ಲಿದ್ದ ಮನೆ ಮಾಲೀಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ (61) ಅವರ ಕುತ್ತಿಗೆಯನ್ನು ಆರೋಪಿ ವರದರಾಜ್ ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ, ಇನ್ನೊರ್ವ ಆರೋಪಿ ಸೈಜಾನ್ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದಾನೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!
ಈ ವೇಳೆ ಗಾಯತ್ರಿ ಅವರು ಜೋರಾಗಿ ಕಿರುಚುವುದನ್ನು ಕೇಳಿ ಸ್ಥಳಕ್ಕೆ ಆಗಮಿಸಿದ ಪಕ್ಕದ ಮನೆವರಾದ ಸುರೇಶ್ ಹಾಗೂ ಪ್ರೇಮಾ ಎಂಬುವವರು ಆರೋಪಿಗಳನ್ನು ಪಕ್ಕಕ್ಕೆ ತಳ್ಳಿದ್ದು, ಸುರೇಶ್ ಆರೋಪಿಗಳನ್ನು ಹಿಡಿದಿದ್ದ ವೇಳೆ ಆರೋಪಿ ವರದರಾಜ್ ಹರಿತವಾದ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದು ಗಾಯಗೊಳಿಸಿದ್ದಾನೆ. ಅವರಿಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: ಪ್ರಮುಖ ಆರೋಪಿ ತೌಫಿಲ್ ಬೆಂಗಳೂರಿನಲ್ಲಿ ಬಂಧನ
ಹೊಂಚು ಹಾಕಿ ಕೃತ್ಯ?: ಗಾಯತ್ರಿ ಅವರು ಮನೆಯಲ್ಲಿ ಅವರ ಗಂಡನ ಜೊತೆಗಿದ್ದು, ಅವರ ಗಂಡನಿಗೆ ನಡೆದಾಡಲು ಅಸಾಧ್ಯವಾಗಿದೆ. ಇಬ್ಬರು ಮಾತ್ರವೇ ಮನೆಯಲ್ಲಿ ವಾಸಸುತ್ತಿದ್ದರು. ಇದನ್ನು ಮನಗಂಡು ಆರೋಪಿಗಳು ಮೊದಲೇ ಸಂಚು ರೂಪಿಸಿ ಮನೆಯೊಡತಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ ಎಂದು ಗಾಯತ್ರಿ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನ: ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಬ್ರಹ್ಮಣ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ವರದರಾಜ್ ಚಿತ್ರದುರ್ಗ ಮೂಲದವನಾಗಿದ್ದು, ಸೈಜಾನ್ ಧರ್ಮಸ್ಥಳದವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಮಗಿಂತ ಮೊದಲು ಮಗಳ ಮದುವೆ ಮಾಡಲು ಮುಂದಾಗಿದ್ದ ಅತ್ತಿಗೆಯನ್ನು ಕೊಂದ ಸಹೋದರರು!