ಬಂಟ್ವಾಳ: ಬಾಲಕನೋರ್ವನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ 20 ದಿನಗಳ ಹಿಂದೆ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಾಲಕನೊಬ್ಬನನ್ನು ಹುಡುಗಿಯ ವಿಚಾರಕ್ಕೆ ಸಬಂಧಿಸಿದಂತೆ ಎಳೆದುಕೊಂಡು ಹೋಗಿ, ಆತನಿಗೆ ಹಿಗ್ಗಾಮುಗ್ಗಾ ಥಳಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹುಡುಗಿಯ ಸುದ್ದಿ ನಿನಗೆ ಬೇಕಾ ಎಂದು ಬೆದರಿಸಿದ್ದಾರೆ. ಅಲ್ಲದೆ, ಹಲ್ಲೆ ನಡೆಸಿ, ಪೊಲೀಸರಿಗೆ ದೂರು ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದಾರೆ.
ಬಾಲಕನ ಮೇಲೆ ಹಲ್ಲೆ ಮಾಡಿರುವ ತಂಡದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ವಿಟ್ಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರುವಿನ ಬಾಲಕನೊಬ್ಬನ ಮೇಲೆ ಸ್ಥಳೀಯ ಕಾಡುಮಠ ಎಂಬಲ್ಲಿನ ಶಾಲಾ ಮೈದಾನವೊಂದರಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ, ದಿನೇಶ್ ಕನ್ಯಾನ ಎಂದು ತಾನೇ ಹೇಳಿಕೊಂಡಿದ್ದಾನೆ. ಈ ಕುರಿತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಇಂಥಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯ ಸಂಘಟನೆಗಳು ಪೊಲೀಸರನ್ನು ಒತ್ತಾಯಿಸಿವೆ.