ಮಂಗಳೂರು: ನಗರದ ಅಡ್ಯಾರ್ ಪರಿಸರದಲ್ಲಿ ಅಕ್ರಮವಾಗಿ ಜಾನುವಾರು ಸಾಗಣೆ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಅಮ್ಮೆಮ್ಮಾರ್ನ ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು(26) ಬಂಧಿತರು. ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ತಸ್ಲೀಮ್ ಯಾನೆ ಗರುಡ ತಸ್ಲೀಮ್ ಹತ್ತು ದಿನಗಳ ಹಿಂದೆಯಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ.
ಈ ಹಿಂದೆ ಕೊಲೆ, ಕೊಲೆಯತ್ನ, ಜಾನುವಾರು ಕಳ್ಳತನ ಹಾಗೂ ಇತರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ತಂಡವೊಂದು ಮಂಗಳೂರು ನಗರದ ಅಡ್ಯಾರ್ ಪರಿಸರದಲ್ಲಿ ಮಾರಾಕಾಯುಧಗಳೊಂದಿಗೆ ಮತ್ತೊಂದು ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಬಂಧಿತ ಆರೋಪಿಗಳಿಂದ 2 ತಲವಾರುಗಳು, 1 ಚೂರಿ, 2 ಮೊಬೈಲ್ ಫೋನ್ ಹಾಗೂ ಮಹೇಂದ್ರ ಪಿಕ್ ಅಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 5,21,000 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಫರಂಗಿಪೇಟೆ ಪ್ರದೇಶದಲ್ಲಿ ಅಕ್ರಮ ಜಾನುವಾರು ಸಾಗಾಟದ ಎರಡು ತಂಡಗಳ ನಡುವೆ ಜಾನುವಾರು ಸಾಗಾಟದ ವಿಷಯದಲ್ಲಿ ಗಲಾಟೆಯಾಗಿತ್ತು. ಅಕ್ರಮ ಜಾನುವಾರು ಸಾಗಾಟ ವಿಚಾರವಾಗಿದ್ದರಿಂದ ಈ ವಿಚಾರವು ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಈ ವಿಚಾರದಲ್ಲಿ ಎರಡು ತಂಡಗಳ ನಡುವೆ ಆಗಾಗ್ಗೆ ಸಣ್ಣ ಪುಟ್ಟ ಮಾತುಕತೆಗಳಾಗಿದ್ದು, ಈ ದಿನ ತಸ್ಲೀಮ್ ಹಾಗೂ ಆತನ ಸಹಚರರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ಮಾರಕಾಯುಧಗಳಾದ ತಲವಾರುಗಳೊಂದಿಗೆ ಹೊಂಚು ಹಾಕುತ್ತಿದ್ದ ಮಾಹಿತಿಯನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ತಸ್ಲೀಮ್ ಯಾನೆ ಗರುಡ ತಸ್ಲೀಮ್ ಎಂಬಾತನು ಈ ಹಿಂದೆ ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ, ರೈಲ್ವೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಹೀಗೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದ. ಇನ್ನೋರ್ವ ಆರೋಪಿ ಹೈದರಾಲಿ ಯಾನೆ ಹೈದು ಎಂಬಾತನು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: 87 ಲಕ್ಷ ರೂ ಮೌಲ್ಯದ ಚಿನ್ನ ವಶ