ಮಂಗಳೂರು: ಭಾರತದ ಜಲಗಡಿಯೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 15ಮಂದಿ ಇರಾನ್ ಪ್ರಜೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದೆ.
ಇರಾನ್ ಪ್ರಜೆಗಳಾದ ಅಝಂ ಅನ್ಸಾರಿ, ಅಬೂಬಕ್ಕರ್ ಅನ್ಸಾರಿ ಮೀಯಾ,ಮೂಸ ದೆಹದಾನಿ, ಶಿದ್ ಬಾಚೂ, ಅಬ್ದುಲ್ ಮಜೀದ್,ಮಜೀದ್ ರಹ್ಮಾನಿ ದಾವೂದ್, ಮುಹಮ್ಮದ್ ಇಸ್ಹಾಕ್ , ಕರೀಂ ಬಕ್ಷ್ ದೂರ್ ಜಾದೆ, ಮುಹಮ್ಮದ್ ಬಲೂಚ್, ಬಮನ್, ಅಬ್ದುಲ್ ಘನಿ ಬಾಪೂರ್, ನಸೀರ್ ಭದ್ರುಜ್, ಅನ್ವರ್ ಬಲೂಚು, ನಬಿ ಬಕ್ಷ್ ಮತ್ತು ಯೂಸುಫ್ ಜಹಾನಿ ಬಂಧಿತರು.
ಅಕ್ಟೋಬರ್ 21 ರಂದು ಲಕ್ಷದ್ವೀಪದ ಬಳಿ ಎರಡು ಇರಾನ್ ಬೋಟ್ಗಳಾದ ಅವಿಧಿ ಮತ್ತು ಇಸಾನ್ ಭಾರತದ ಜಲಸೀಮೆಯಲ್ಲಿತ್ತು. ಭಾರತೀಯ ಕೋಸ್ಟ್ ಗಾರ್ಡ್ ಈ ಮೀನುಗಾರಿಕಾ ಬೋಟ್ಗಳನ್ನು ನಿಲ್ಲಿಸಲು ಸೂಚನೆ ನೀಡಿದರಾದರೂ ಬೋಟ್ ನಿಲ್ಲಿಸದೆ ಮುಂದೆ ಸಾಗಿದ್ದರು. ನಂತರ ಕಾರ್ಯಾಚರಣೆ ನಡೆಸಿ ಬೋಟ್ ನಿಲ್ಲಿಸಿದ ಅಧಿಕಾರಿಗಳು, ತಪಾಸಣೆ ನಡೆಸಿ ಅವರ ದಾಖಲೆಗಳನ್ನು ಕೇಳಿದ್ದಾರೆ.
ಇವರ ಬಳಿ ಯಾವುದೇ ದಾಖಲೆ ಇಲ್ಲ ಎಂಬುದು ಕಂಡುಬಂದಾಗ ಕೋಸ್ಟ್ಗಾರ್ಡ್ ಅಧಿಕಾರಿಗಳು 10 ಜನರನ್ನೂ ವಶಕ್ಕೆ ಪಡೆದಿದೆ. ಇವರನ್ನು ವಶಪಡಿಸಿಕೊಂಡು ಬರುವಾಗ ಅವಿಧಿ ಬೋಟ್ ಲಕ್ಷದ್ವೀಪದಲ್ಲಿ ಮುಳುಗಿದೆ. ಈ ಬೋಟ್ನಲ್ಲಿ ಇದ್ದವರನ್ನು ಇಸಾನ್ ಬೋಟ್ನಲ್ಲಿ ನವ ಮಂಗಳೂರು ಬಂದರಿಗೆ ಕರೆದುಕೊಂಡು ಬಂದು, ಮಂಗಳೂರು ಸಿಎಸ್ಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 14 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.