ಮಂಗಳೂರು (ದಕ್ಷಿಣ ಕನ್ನಡ): ವಿದೇಶದಿಂದ ಆಗಮಿಸುವ ಭಾರತೀಯರಿಗೆ ಕ್ವಾರಂಟೈನ್ ಸೌಲಭ್ಯ ವ್ಯವಸ್ಥೆ ಮಾಡಲು ವಿವಿಧ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ವಿಮಾನ ನಿಲ್ದಾಣ ಹಾಗೂ ಬಂದರು ಮೂಲಕ ಆಗಮಿಸುವ ಪ್ರಯಾಣಿಕರಿಗಾಗಿ ಎರಡು ತಂಡಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳು ನಿಯೋಜನೆ ಮಾಡುತ್ತಾರೆ.
ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶಗಳಲ್ಲಿ ಸರ್ಕಾರ ನೀಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸುವುದು. ಹೊರ ದೇಶದಿಂದ ಬರುವ ಎಲ್ಲಾ ಭಾರತೀಯರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಖಾತರಿ ಪಡಿಸುವುದು ಇವರ ಕೆಲಸವಾಗಿರಲಿದೆ.
ಅಲ್ಲದೆ ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶಗಳಿಗೆ ಬೇಕಾಗಿರುವ ವಾಹನಗಳು, ವೈದ್ಯಾಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವುದು, ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶದಿಂದ ಕ್ವಾರಂಟೈನ್ ಕೇಂದ್ರದವರೆಗೆ ವಾಹನಗಳ ನಿಯೋಜನೆ ಮಾಡುವುದು, ಅಲ್ಲದೆ ಮೂರನೇ ತಂಡದ ಅಧಿಕಾರಿಗಳು ನಿಗದಿಪಡಿಸಿರುವ ಹೋಟೆಲ್ಗಳ ಸಂಪೂರ್ಣ ಮಾಹಿತಿ ಹಾಗೂ ಪ್ರಯಾಣಿಕರ ಮಾಹಿತಿಗಳನ್ನು ಈ ಅಧಿಕಾರಿಗಳು ಹೊಂದಿರಬೇಕು. ಕ್ವಾರಂಟೈನ್ಗೆ ಒಳಗಾಗಿರುವವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾರಾದರು ಅಧಿಕಾರಿಗಳು ತಮಗೆ ನಿಯೋಜಿಸಿರುವ ಕಾರ್ಯದಲ್ಲಿ ತಪ್ಪಿದ್ದಲ್ಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.