ಮಂಗಳೂರು: ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ರಾಜ್ಯ ಸರ್ಕಾರ ಏಕೆ ಅಧಿಕಾರಿಯನ್ನು ನೇಮಿಸಿದೆ ಎಂಬುದು ನನಗೆ ತಿಳಿದಿಲ್ಲ. ನಮ್ಮಲ್ಲಿ ಈ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ. ಕೋರ್ಟ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಆದರೆ, ಯಾವುದೇ ಆದೇಶವನ್ನು ಜಾರಿಗೆ ತರುವಾಗಲೂ ಶಾಂತಿ, ಸೌಹಾರ್ದತೆ ಕಾಪಾಡುವುದು ಜಿಲ್ಲಾಡಳಿದ ಜವಾಬ್ದಾರಿ ಎಂದು ಮಾಜಿ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾನು ಆ ಕ್ಷೇತ್ರದ ಶಾಸಕನಾಗಿ ದಕ್ಷಿಣ ಭಾರತದ ಅಜ್ಮೇರ್ ಎಂದೇ ಪ್ರಖ್ಯಾತವಾದ ಉಳ್ಳಾಲ ದರ್ಗಾದ ಪಾವಿತ್ರ್ಯತೆಯ ಬಗ್ಗೆ ಗೌರವವಿದೆ. ಅದಕ್ಕೆ ಕಳಂಕ ಬಾರದ ರೀತಿಯಲ್ಲಿ ಜಿಲ್ಲಾಡಳಿತ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದ್ರು.
ಮುಂದುವರೆದು ಮಾತನಾಡಿದ ಅವರು, ಇಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಪ್ರಶ್ನೆ ಬರೋದಿಲ್ಲ. ಸರ್ಕಾರ ಮಾಡಿರುವುದು ಸರಿಯೇ? ತಪ್ಪೇ? ಎಂದು ನಿರ್ಧರಿಸಲು ಕೋರ್ಟ್ ಇದೆ. ನನ್ನ ಕ್ಷೇತ್ರದಲ್ಲಿ ಸಹೋದರತೆ, ಶಾಂತಿ, ಒಗ್ಗಟ್ಟು ನೆಲೆಸಬೇಕು. ಅಲ್ಲದೆ, ಆ ಪವಿತ್ರ ಕ್ಷೇತ್ರದ ಗೌರವ ಉಳಿಯಬೇಕು. ಇದು ಜಿಲ್ಲಾಡಳಿತದ ಜವಾಬ್ದಾರಿ. ನಾನು ಕಳೆದ ಐದು ವರ್ಷಗಳಿಂದ ಇಲ್ಲಿನ ಸಮಸ್ಯೆಗಳನ್ನು ಸಂಧಾನದ ಮುಖಾಂತರವೇ ಬಗೆಹರಿಸಲು ಪ್ರಯತ್ನಪಟ್ಟಿದ್ದೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದೆಯೂ ದರ್ಗಾದಲ್ಲಿ ಸಮಸ್ಯೆಗಳೆದುರಾದಾಗ ರಾಜಿ ಸಂಧಾನವಾದರೆ ಅದೇ ಬಹಳ ಸಂತೋಷ ಎಂದು ಯು.ಟಿ. ಖಾದರ್ ಹೇಳಿದರು.