ಪುತ್ತೂರು: ಪೌರತ್ವ ಕಾಯ್ದೆ ಕೇವಲ ಮುಸ್ಲಿಂರಿಗೆ ಮಾತ್ರ ಸೀಮಿತವಲ್ಲ. ಈ ದೇಶದ ಬಡಜನತೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನತೆಯ ನಾಗರಿಕತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಾಗಿದ್ದು, ದೇಶದ ಪಾಲಿಗೆ ಮಾರಕವಾಗಲಿದೆ ಎಂದು ಖ್ಯಾತ ಚಿಂತಕ, ಅಂಕಣಕಾರ ಶಿವಸುಂದರ್ ಕೊಪ್ಪ ಹೇಳಿದರು.
ನಗರದ ಕಿಲ್ಲೆ ಮೈದಾನದಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಸಾಕ್ಷಿ, ಪುರಾವೆ ಆಧಾರದಲ್ಲಿ ದೇಶದ ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ನಾವು ಬೀದಿ ಸಂಸತ್ತಿನಲ್ಲಿ ಉತ್ತರ ಕೊಡಬೇಕಾಗಿದೆ. ದೊಡ್ಡ ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಾಗಿದೆ. ಇಲ್ಲದಿದ್ದರೆ ನಮಗೆ ದೇಶ ದಕ್ಕುವುದು ಕಷ್ಟ. ಸಿಎಎ ಹಿಂದೆ ಯಾವುದೇ ಉದಾತ್ತ ಉದ್ದೇಶವಿಲ್ಲ. ಮುಸ್ಲಿಂರ ಎದೆಗೆ ಮತ್ತು ಹಿಂದುಗಳ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಇದಾಗಿದೆ. ವಲಸಿಗರ ಪಟ್ಟಿ ಮಾಡಬೇಕಾದ ಅವಶ್ಯಕತೆಯನ್ನು ಬಿಟ್ಟು ನಾಗರಿಕರ ಪಟ್ಟಿ ತಯಾರಿಸುವ ಔಚಿತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಬಳಿಕ ಚಿಂತಕ ಮಹೇಂದ್ರ ಕುಮಾರ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂರಿಗಿಂತಲೂ ಹಿಂದೂಗಳಿಗೆ ಹೆಚ್ಚು ಅಪಾಯಕಾರಿ. ಈ ಕಾಯ್ದೆಗೆ ಇಲ್ಲಿನ ಬಂಟ, ಬಿಲ್ಲವ, ಒಕ್ಕಲಿಗರು ಸೇರಿದಂತೆ ಹಿಂದೂ ಸಮುದಾಯದ ಬಡವರು, ಅನಾಥರು, ಗಿರಿಜನರು ಹೆಚ್ಚು ಬಲಿಯಾಗಲಿದ್ದಾರೆ. ಬಾಂಗ್ಲಾ ವಲಸಿಗರನ್ನು ಮುಂದಿಟ್ಟುಕೊಂಡು ಇಲ್ಲಿನವರಿಗೆ ತೊಂದರೆ ನೀಡುವುದು. ಅವರ ಮತದಾನದ ಹಕ್ಕು ಮತ್ತು ನಾಗರಿಕ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ವಂಚಿತರಾಗಿಸುವ ಈ ಕಾಯ್ದೆ ವಿರುದ್ಧ ಹಿಂದೂಗಳು ಪ್ರತಿಭಟಿಸುವುದು ಅನಿವಾರ್ಯ ಎಂದರು.