ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದೇ ರೀತಿ ನಗರದ ಡೊಂಗರಕೇರಿ ಅಶ್ವತ್ಥ ಕಟ್ಟೆ ಸಮೀಪ ಕಾಮಗಾರಿ ನಡೆಸುತ್ತಿದ್ದ ವೇಳೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಶತಮಾನಗಳ ಹಿಂದಿನ ಬಾವಿ ಪತ್ತೆಯಾಗಿರೋದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಪತ್ತೆಯಾಗಿರುವ ಬಾವಿಯು ಸುಮಾರು ಐವತ್ತು ಅಡಿ ಆಳವಿದ್ದು, ಸುತ್ತಲೂ ಕೆಂಪುಕಲ್ಲಿನಿಂದ ಕಟ್ಟಲಾಗಿದೆ. ಈಗಲೂ ಬಾವಿ ಸುಸ್ಥಿತಿಯಲ್ಲಿದೆ. 4.50 ಮೀಟರ್ ಅಗಲವಿರುವ ಈ ಬಾವಿಯಲ್ಲಿ ಸುಮಾರು 15 ಅಡಿ ಆಳದವರೆಗೆ ಶುದ್ಧ ನೀರು ಇರುವುದಾಗಿ ತಿಳಿದು ಬಂದಿದೆ.
ಅಂದಿನ ಮಂಗಳೂರು ಮುನ್ಸಿಪಾಲಿಟಿ 1917 ರಲ್ಲಿ ನಗರದ ವಿವಿಧೆಡೆಯಲ್ಲಿ ತೋಡಿರುವ 18 ಬಾವಿಗಳಲ್ಲಿ ಈಗ ಪತ್ತೆಯಾಗಿರುವ ಬಾವಿಯೂ ಒಂದು. ಈ ಹಿಂದೆ ಇದು ಆವರಣವಿಲ್ಲದ ಬಾವಿಯಾಗಿದ್ದು, ಬಳಿಕ ಆವರಣ ನಿರ್ಮಿಸಲಾಗಿತ್ತು. ಅಂದು ಅಲ್ಲಿನ ಬಹಳಷ್ಟು ಕುಟುಂಬ ಈ ಬಾವಿಯ ನೀರನ್ನೇ ದಿನ ಬಳಕೆಗೆ ಉಪಯೋಗಿಸುತ್ತಿತ್ತು. ಆ ಬಳಿಕ ಮಂಗಳೂರು ಮುನ್ಸಿಪಾಲಿಟಿಯು ನಗರಕ್ಕೆ ನಲ್ಲಿ ನೀರಿನ ವ್ಯವಸ್ಥೆ ಮಾಡಿತ್ತು. ಕ್ರಮೇಣ ಈ ಬಾವಿಯ ನೀರು ಬಳಕೆ ಮಾಡುವವರೂ ಕಡಿಮೆಯಾದರು. ಅದೇ ಸಂದರ್ಭದಲ್ಲಿ ಒಂದೆರಡು ಮಂದಿ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ನಡೆದಿತ್ತಂತೆ. ಹಾಗಾಗಿ ಅಂದಿನ ಮುನ್ಸಿಪಾಲಿಟಿ 1969ರಲ್ಲಿ ಉಪಯೋಗವಿಲ್ಲವೆಂದು ಈ ಬಾವಿಯನ್ನು ಮುಚ್ಚಿತ್ತು.
ಇದನ್ನೂ ಓದಿ: ಕ್ರೆಡಿಟ್ ಪಾಲಿಟಿಕ್ಸ್ ಅನಿವಾರ್ಯತೆ ಕಾಂಗ್ರೆಸ್ಗೆ ಇಲ್ಲ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿರುವ ವೇಳೆಯಲ್ಲಿ ಪತ್ತೆಯಾಗಿರುವ ನಾಲ್ಕನೇ ಪುರಾತನ ಬಾವಿ ಇದಾಗಿದೆ. ಈ ಹಿಂದೆ ಕಳೆದ ಸೆಪ್ಟೆಂಬರ್ನಲ್ಲಿ ಹಂಪನಕಟ್ಟೆ ಬಳಿ ಶತಮಾನದ ಹಿಂದಿನ ಬಾವಿ ಪತ್ತೆಯಾಗಿತ್ತು. ಇದೀಗ ಆ ಬಾವಿಗೆ ಆವರಣ ನಿರ್ಮಿಸಿ ಸುಂದರಗೊಳಿಸಲಾಗಿದೆ. ಆ ಬಳಿಕ ಬೋಳಾ ಜಂಕ್ಷನ್ ಬಳಿ ಬ್ರಿಟಿಷ್ ಕಾಲದ ಪುರಾತನ ಬಾವಿ ಗೋಚರಿಸಿತ್ತು. ತಿಂಗಳ ಹಿಂದೆ ನವಭಾರತ ಸರ್ಕಲ್ ಒಳಗೆಡೆಯೇ ಒಂದು ಬಾವಿ ಪತ್ತೆಯಾಗಿತ್ತು.