ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ನೀರಿನ ಸಂಸ್ಕರಣೆಗೆ ಶೀಘ್ರದಲ್ಲಿಯೇ ಸರ್ಕಾರದಿಂದ 5 ಕೋಟಿ ರೂ. ಅನುದಾನ ಪಡೆದು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪಿಲಿಕುಳ ನಿಸರ್ಗಧಾಮದ ಆಡಳಿತ ಕಚೇರಿಯಲ್ಲಿ ನಡೆದ ಪಚ್ಚನಾಡಿ ಒಳಚರಂಡಿ ನೀರು ಶುದ್ಧೀಕರಣ ಘಟಕದ ಸಮಸ್ಯೆ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಚ್ಚನಾಡಿಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರಿನಿಂದ ಸ್ಥಳೀಯರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆಯ ಅಧಿಕಾರಿಗಳು ತಕ್ಷಣ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕೊಳಚೆ ನೀರು ಸಂಸ್ಕರಣಾ ಘಟಕದ ತಾಂತ್ರಿಕ ಸಮಸ್ಯೆಯನ್ನು ಒಂದು ತಿಂಗಳೊಳಗೆ ಸರಿಪಡಿಸಿ ಶುದ್ಧೀಕರಣ ಮಾಡಿ ಪೂರ್ಣಗೊಳಿಸಲಾಗುತ್ತದೆ ಎಂದರು.
ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆದುಕೊಂಡು ಎನ್.ಐ.ಟಿ.ಕೆ. ಸುರತ್ಕಲ್ ನಡೆಸಲಿರುವ ಸರ್ವೇಯನುಸಾರ ಸಮರ್ಪಕ ಯೋಜನೆ ಕಾರ್ಯರೂಪಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ಯೋಜನೆಯಿಂದ ಕೊಳಚೆ ನೀರು ತಡೆಯಲು ಸಾಧ್ಯವಾಗಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮೇಯರ್ ದಿವಾಕರ್ ಪಾಂಡೇಶ್ವರ, ಆಯುಕ್ತ ಅಜಿತ್ ಕುಮಾರ್ ಶಾನಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.