ಮಂಗಳೂರು: ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಷಷ್ಠಿ ಮಹೋತ್ಸವದ ಸಂತೆ ವ್ಯಾಪಾರದಲ್ಲಿ ಅನ್ಯಧರ್ಮದ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವ್ಯಾಪಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ನೀಡಿದರು.
ಡಿ.14ರಿಂದ 19ವರೆಗೆ ಕುಡುಪು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯಲಿದೆ. ಮಹೋತ್ಸವದಲ್ಲಿ ವ್ಯಾಪಾರದ ಏಲಂನಲ್ಲಿ ಭಾಗವಹಿಸಲು ಮುಂದಾದಾಗ "ನಿಮಗೆ ರಕ್ಷಣೆ ನೀಡಲು ನಮಗೆ ಸಾಧ್ಯವಿಲ್ಲ" ಎಂದು ದೇವಾಲಯದ ಸಂತೆ ವ್ಯಾಪಾರಕ್ಕೆ ಸಂಬಂಧಪಟ್ಟವರು ಹೇಳಿಕೆ ನೀಡಿ ಅನ್ಯ ಧರ್ಮೀಯರು ಸಂತೆ ವ್ಯಾಪಾರ ಮಾಡದಂತೆ ಪರೋಕ್ಷ ತಡೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಸಂಚಾಲಕ ಬಿ.ಕೆ.ಇಮ್ತಿಯಾಝ್ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ನಡೆಯುತ್ತಿರುವುದು ಖಂಡನೀಯ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲವಾಗಿದೆ ಎಂದು ಬಿ.ಕೆ.ಇಮ್ತಿಯಾಝ್ ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ "ಮಂಗಳೂರು ತಾಲೂಕಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿ.14ರಿಂದ ಡಿ.19ರವರೆಗೆ ಷಷ್ಠಿ ಮಹೋತ್ಸವದ ಅಂಗವಾಗಿ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಸಂತೆಯಲ್ಲಿ ವ್ಯಾಪಾರ ನಡೆಸಲು ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಯನ್ನು ಮಾಡದೆ ಧಾರ್ಮಿಕ ತಾರತಮ್ಯ ಎಸಗಲಾಗಿದೆ. ಈ ದೇವಸ್ಥಾನದ ಪ್ರಾಂಗಣದ ಹೊರಗೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಯಲಿದೆ. ಕೆಲವು ಸಂಘಟನೆಗಳು ಅನ್ಯ ಧರ್ಮೀಯರಿಗೆ ಜಾಗ ಕೊಟ್ಟರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ವ್ಯಾಪಾರಕ್ಕೆ ಜಾಗ ನಿರಾಕರಣೆ ಮಾಡಿವೆ. ಬಡ ಅನ್ಯ ಧರ್ಮದ ವ್ಯಾಪಾರಿಗಳು ಜಾತ್ರೆ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವವರು. ಅವರ ಬದುಕುವ ಹಕ್ಕನ್ನು ಜಿಲ್ಲಾಡಳಿತ ರಕ್ಷಣೆ ಮಾಡಬೇಕಿದೆ. ಕೂಡಲೇ ಎಲ್ಲಾ ಸಂತೆ ವ್ಯಾಪಾರಿಗಳಿಗೆ ಸದರಿ ಜಾತ್ರೆ ಉತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ. ಮತ್ತು ಜಾಗ ಹಂಚಿಕೆ ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಲ್ಲಾ ವ್ಯಾಪಾರಿಗಳೂ ಸೂಕ್ತ ಕಾನೂನು ರಕ್ಷಣೆ ನೀಡಬೇಕು" ಎಂದು ವಿನಂತಿಸಲಾಗಿದೆ.
ಇದನ್ನೂ ಓದಿ: ಮಂಗಳಾದೇವಿ ನವರಾತ್ರಿ ಉತ್ಸವ: ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ-ಪ್ರತಿಭಟನೆ