ಮಂಗಳೂರು: ರೈಲ್ವೆ ವಿಭಾಗದ ಯಾವುದೇ ಸಮಸ್ಯೆಗಳಿದ್ದರೂ ಶೀಘ್ರದಲ್ಲೇ ಬಗೆಹರಿಸುತ್ತೇನೆ. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ 10 ದಿನಗಳೊಳಗೆ ರಾಜ್ಯ ರೈಲ್ವೇ ಸಚಿವರು ಜಿಲ್ಲೆಗೆ ಬರಲಿದ್ದಾರೆ.ಈ ಸಂದರ್ಭ ಜಿಲ್ಲೆಯ ಎಲ್ಲಾ ರೈಲ್ವೆ ಸ್ಟೇಷನ್ಗಳಿಗೆ ಭೇಟಿ ನೀಡಿ ವಿಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ರೈಲ್ವೇ ಇಲಾಖೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರಿನಿಂದ ಪುತ್ತೂರಿಗೆ ಹೋಗುವ ರೈಲು ಮರಳಿ ಸಾಯಂಕಾಲ ಹೊತ್ತಿಗೆ ಮಂಗಳೂರು ರೈಲ್ವೇ ಸ್ಟೇಷನ್‌ನಲ್ಲಿ ನಿಲುಗಡೆಯಾಗುತ್ತಿಲ್ಲ. ಈ ಹಿಂದೆ ಈ ರೈಲು ನಿಲುಗಡೆಯಾಗುತ್ತಿತ್ತು. ಆದ್ರೆ, ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ ಹೋದ ಪ್ರಯಾಣಿಕರಿಗೆ ಮರಳಿ ಪ್ರಯಾಣ ಮಾಡಲು ಇಲ್ಲಿ ರೈಲು ನಿಲುಗಡೆ ಮಾಡುವ ಅವಶ್ಯಕತೆ ಇದೆ ಎಂಬ ಮನವಿ ಮಾಡಲಾಗಿದೆ. ಹೀಗಾಗಿ ಶೀಘ್ರದಲ್ಲೇ ಈ ರೈಲನ್ನು ಮಂಗಳೂರು ಸ್ಟೇಷನ್‌ನಲ್ಲೇ ತಂಗುವಂತೆ ಮಾಡಲಾಗುವುದು ಎಂದು ಮೈಸೂರು ಡಿವಿಷನ್ ರೈಲ್ವೆ ಅಧಿಕಾರಿ ಭರವಸೆ ಕೊಟ್ಟರು.
ಪರಂಗಿಪೇಟೆ ರೈಲ್ವೆ ನಿಲ್ದಾಣದಲ್ಲಿ ಲೆವೆಲ್ ಕ್ರಾಸಿಂಗ್ ಮುಚ್ಚಿಹೋಗುವ ಮುನ್ನ ಉಳಿದಿರುವ ಸಂಪರ್ಕ ರಸ್ತೆಯ ಪರಿಶೀಲನೆ ನಡೆಸಿ, ಅದಕ್ಕೆ ಕಾಂಕ್ರಿಟೀಕರಣ ಮಾಡಬೇಕೆಂದು ಸಂಸದ ನಳಿನ್ ಕುಮಾರ್ ಜಿಲ್ಲಾಧಿಕಾರಿಗೆ ಸೂಚಿಸಿದ್ರು.
ಈ ವೇಳೆ ಬೆಂಗಳೂರು-ಮಂಗಳೂರು ರೈಲು ಸಮಯ ಬದಲಾವಣೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನವಿ ಕೇಳಿ ಬಂತು. ಮಂಗಳೂರು ಸೆಂಟ್ರಲ್‌ನಿಂದ ಕಾರವಾರ ರೈಲು ಬೆಳಗ್ಗೆ 6.20ಕ್ಕೆ ಬರುವ ಬದಲು ಬೆಳಗ್ಗೆ 5.15 ಕ್ಕೆ ಬರುತ್ತದೆ. ಈ ಸಮಯ ಬದಲಾಯಿಸಬೇಕೆಂದು ಈ ಹಿಂದಯೇ ಮನವಿ ನೀಡಿದ್ದರೂ, ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಸಮಯ ಬದಲಾವಣೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಪಾಲ್ಘಾಟ್, ಮೈಸೂರು ಡಿವಿಷನ್, ಕೊಂಕಣ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.