ಬೆಳ್ತಂಗಡಿ(ದ.ಕ): ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರಬದಿಯ ಸುಲ್ಕೇರಿ ಗ್ರಾಮದ ನೆಕ್ಕರೆಪಲ್ಕೆ ಎಂಬಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೃಷಿ ಮಾಡಿ ಬದುಕುತ್ತಿರುವ ಆದಿವಾಸಿ ಕುಟುಂಬಗಳ ಜಮೀನನ್ನು ಬೆಳ್ತಂಗಡಿ ತಹಶೀಲ್ದಾರ್ ತೆರವುಗೊಳಿಸಿ ತಂತಿಬೇಲಿ ಹಾಕಿರುವ ಕ್ರಮವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಕೂಡಲೇ ಅವರಿಗೆ ಕೃಷಿ ಭೂಮಿ ನೀಡಬೇಕು. ಹಾಕಿರುವ ಬೇಲಿಯನ್ನು ತೆಗೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಮಿತಿ ಸಂಚಾಲಕ ಶೇಖರ ಎಲ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಾದ್ಯಂತ ಸರಕಾರಿ ಜಮೀನಿನನ್ನು ಭೂ ಮಾಲೀಕರು ಅಕ್ರಮ ಮಾಡುತ್ತಿದ್ದಾರೆ. ಆದರೆ, ಅದು ಯಾವುದನ್ನೂ ಗಮನಿಸದ ತಹಶೀಲ್ದಾರರು ಆದಿವಾಸಿಗಳ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ.
ಇಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಕಳೆದ ಹತ್ತಾರು ವರ್ಷಗಳಿಂದ ಮನೆಕಟ್ಟಿ ವಾಸಿಸುತ್ತಿದ್ದು, ಇವರಿಗೆ 94 ಸಿ ಯಲ್ಲಿ ಮನೆ ನಿವೇಶನಗಳ ಹಕ್ಕುಪತ್ರವೂ ಸಿಕ್ಕಿದೆ. ಇಲ್ಲಿ ವಾಸಿಸುತ್ತಿರುವ ಎಲ್ಲ ಕುಟುಂಬಗಳೂ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸಿಸಲು ಸಾಧ್ಯವಿಲ್ಲದೇ ಹೊರಬಂದವರಾಗಿದ್ದಾರೆ. ಈ ಕುಟುಂಬಗಳು ಕೇವಲ ಒಂದರಿಂದ ಒಂದೂವರೆ ಎಕರೆ ಜಮೀನನ್ನು ಮಾತ್ರ ಹೊಂದಿದ್ದು, ಅದನ್ನು ತೆರವುಗೊಳಿಸಲು ತಾಲೂಕು ಆಡಳಿತ ಮುಂದಾಗುತ್ತಿರುವುದು ಖಂಡನೀಯ ಎಂದರು.
ಸುಲ್ಕೇರಿ ಗ್ರಾಮದ ಸ. ನಂಬರ್ 65/1ಪಿ1 ರಲ್ಲಿ 602 ಎಕರೆ ಸರಕಾರಿ ಜಮೀನಿದ್ದು, ಇದರಲ್ಲಿ 190 ಎಕರೆ ಜಮೀನನ್ನು ಗಿರಿಜನರ ಪುನರ್ವಸತಿಗಾಗಿ ಮೀಸಲಿಟ್ಟಿದೆ. ಆದರೆ, ಇದು ದಾಖಲೆಗಳಲ್ಲಿ ಮಾತ್ರ ಇದ್ದು ಇಲ್ಲಿ ಭಾರೀ ಪ್ರಮಾಣದಲ್ಲಿ ಜಮೀನು ಅಕ್ರಮ ನಡೆದಿದೆ. ಈವರೆಗೆ ಯಾವೊಬ್ಬ ಆದಿವಾಸಿಗೂ ಇಲ್ಲಿ ಜಮೀನು ನೀಡಲಾಗಿಲ್ಲ ಇರುವವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ತಹಶೀಲ್ದಾರ್ ಮೊದಲು ಇದರ ಸುತ್ತಮುತ್ತ ಶ್ರೀಮಂತ ಒತ್ತುವರಿದಾರರ ಹತ್ತಾರು ಎಕರೆ ಜಮೀನಿನ ಅಕ್ರಮವನ್ನು ತೆರವುಗೊಳಿಸಲಿ. ಈಗಾಗಲೇ ತಾಲೂಕು ಆಡಳಿತ ಈ ಒತ್ತುವರಿದಾರರನ್ನು ಗುರುತಿಸಿ ಪಟ್ಟಿ ತಯಾರಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯವಿಲ್ಲದ ಅಧಿಕಾರಿಗಳು ಈ ಬಡವರನ್ನು ಒಕ್ಕಲೆಬ್ಬಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ವಸಂತ ನಾಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸ್ಥಳೀಯ ನಿವಾಸಿಗಳಾದ ರವಿ ಮಲೆಕುಡಿಯ ಹಾಗೂ ಜಗನ್ನಾಥ ಮಲೆಕುಡಿಯ ಇದ್ದರು.