ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟವನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪರ ಒಲವು ಹೊಂದಿದ್ದ ಮತ್ತು ನಗರದಲ್ಲಿ ಇತ್ತೀಚೆಗೆ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್ ಎಂಬಾತನೇ ಈ ನಡೆಸಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಶಾರೀಕ್ ಎಂಬಾತನಿಂದಲೇ ಸ್ಫೋಟ: ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 19 ರ ಸಂಜೆ ಆಟೋವೊಂದು ಓರ್ವ ಪ್ರಯಾಣಿಕನೊಂದಿಗೆ ನಾಗೂರಿಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿತ್ತು. ರೋಹನ್ ಸ್ಟಾರ್ ಕಟ್ಟಡದ ಎದುರುಗಡೆ ತಲುಪುತ್ತಿದ್ದಂತೆ ಪ್ರಯಾಣಿಕನ ಚೀಲದಲ್ಲಿದ್ದ ವಸ್ತು ದಿಢೀರ್ ಸ್ಫೋಟಗೊಂಡಿತ್ತು. ಬೆಂಕಿ ಹೊತ್ತಿಕೊಂಡು ಪ್ರಯಾಣಿಕ ಮತ್ತು ಆಟೋ ಚಾಲಕನಿಗೆ ಸುಟ್ಟ ಗಾಯಗಳಾಗಿತ್ತು. ಆಟೋ ಚಾಲಕ ಕೆ ಪುರುಷೋತ್ತಮ (60) ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಸ್ಫೋಟದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ತಿಳಿದು ಬಂದಿದೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಶಾರೀಕ್ ಎಂಬಾತನೇ ಸ್ಫೋಟದ ರೂವಾರಿ ಎಂದು ಅವರು ಮಾಹಿತಿ ನೀಡಿದರು.
ಆಧಾರ್ ಕಾರ್ಡ್ ದುರುಪಯೋಗ: ಗಾಯಾಳು ರಿಕ್ಷಾ ಚಾಲಕ ಹಾಗೂ ಆರೋಪಿ ಶಾರೀಕ್ ಸದ್ಯ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರೀಕ್ ಬಳಿ ಆಧಾರ್ ಕಾರ್ಡ್ ದೊರೆತಿದ್ದು, ಅದರಲ್ಲಿ ಪ್ರೇಮರಾಜ್ ಎಂಬ ಹೆಸರಿದೆ. ವಿಳಾಸ ಹುಬ್ಬಳ್ಳಿ ಮೂಲದ ಒಂದು ಕುಟುಂಬಕ್ಕೆ ಸೇರಿದೆ. ಈ ವಿಳಾಸವನ್ನು ಖಚಿತಪಡಿಸಿಕೊಳ್ಳಲಾಗಿದೆ. ಪ್ರೇಮರಾಜ್ ಎಂಬ ವ್ಯಕ್ತಿ ಕೆಲವು ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. ಆರೋಪಿ ಶಾರೀಕ್ ಈ ಆಧಾರ್ ಕಾರ್ಡ್ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಉಗ್ರರ ಪರ ಗೋಡೆ ಬರಹ: ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಹಾಗೂ ಕುಟುಂಬದವರು ಆತನನ್ನು ಗುರುತು ಹಿಡಿದಿದ್ದರಿಂದ ಮೊಹಮ್ಮದ್ ಶಾರೀಕ್(24) ಎಂದು ತಿಳಿದುಬಂತು. ಈತನ ಮೇಲೆ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. 2020 ನವೆಂಬರ್ 27 ರಂದು ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಉಗ್ರರ ಪರ ಗೋಡೆ ಬರಹ ಬರೆಯಲಾಗಿತ್ತು. ನವೆಂಬರ್ 28 ರಂದು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಗೋಡೆ ಬರಹ ಕಂಡುಬಂದಿತ್ತು. ಈ ಮೇಲಿನ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಮೂವರು ಆರೋಪಿಗಳು ಬಿಡುಗಡೆ ಹೊಂದಿದ್ದರು.
ತಲೆಮರೆಸಿಕೊಂಡಿದ್ದ ಶಾರೀಕ್: 2022 ಸೆ. 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967 ರಲ್ಲಿ ಶಾರೀಕ್ 1ನೇ ಆರೋಪಿಯಾಗಿದ್ದ. ಪ್ರಕರಣ ದಾಖಲಾದ ನಂತರ ಶಾರೀಖ್ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. 2022 ನವೆಂಬರ್ 19 ರಂದು ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಬಿ.ಸಿ.ರೋಡ್ ಮೂಲಕ ಮಂಗಳೂರು ಹೊರ ವಲಯದಲ್ಲಿ ಬಸ್ಸಿನಿಂದ ಇಳಿದು ನಂತರ ಆಟೋದಲ್ಲಿ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದ. ಈ ವೇಳೆ ಕುಕ್ಕರ್ ಬಾಂಬ್ ಸ್ಫೋಟ ನಡೆದಿದೆ.
ಸ್ಫೋಟಕ್ಕೆ ಬಳಸಲಾದ ವಸ್ತುಗಳು: ಈ ಬಗ್ಗೆ ತನಿಖೆ ನಡೆಸಿದಾಗ ಮೈಸೂರಿನಲ್ಲಿ ಆರೋಪಿತ ವಾಸವಿದ್ದ ಬಾಡಿಗೆ ಮನೆಯಿಂದ ಸಲ್ಪೆಕ್ಸ್ ಸಲ್ಫರ್ ಪೌಡರ್, ನಟ್, ಬೋಲ್ಟ್‌ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಡ್ರೈಂಡರ್, ಮಿಕ್ಸರ್, 150 ಮ್ಯಾಚ್ ಬಾಕ್ಸ್, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್‌ಗಳು, ಮೊಬೈಲ್ ಡಿಸ್‌ಪ್ಲೇಗಳು, ಸ್ಫೋಟಕಕ್ಕೆ ಬಳಸುವ ವಿವಿಧ ಬಗೆಯ ಕೆಮಿಕಲ್ಸ್ ಸಿಕ್ಕಿದೆ. ಸ್ಫೋಟಿಸಲು ಬಾಂಬ್ ತಯಾರಿಸುತ್ತಿದ್ದ ಎಂದು ಎಡಿಜಿಪಿ ತನಿಖೆಯ ಪ್ರಮುಖ ಅಂಶಗಳನ್ನು ವಿವರಿಸಿದರು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಲಿಂಕ್: ಶಿವಮೊಗ್ಗದ ತುಂಗಾ ನದಿ ದಡದಲ್ಲಿ ಇದೇ ವರ್ಷ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣದ ಮೂರು ಆರೋಪಿಗಳ ಜೊತೆ ಶಾರೀಕ್ ಸಂಪರ್ಕದಲ್ಲಿದ್ದ. ಆ ಬಳಿಕ ಪೊಲೀಸರಿಂದ ತಲೆಮರೆಸಿಕೊಂಡು ಕೊಯಂಬತ್ತೂರು, ಕೇರಳಕ್ಕೆ ತೆರಳಿ ಕೊನೆಗೆ ಮೈಸೂರಿಗೆ ಬಂದು ಬಾಡಿಗೆ ಮನೆಯಲ್ಲಿದ್ದ. ಅಲ್ಲಿ ಮೊಬೈಲ್ ರಿಪೇರಿ ತರಬೇತಿ ಕ್ಲಾಸ್ಗೆ ಹೋಗುತ್ತಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.
ವೇಗವಾಗಿ ಸಾಗುತ್ತಿದೆ ತನಿಖೆ: ಆರೋಪಿ ಗುಣಮುಖನಾದ ನಂತರ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು. ಪ್ರಕರಣದ ತನಿಖೆಗೆ ಮಂಗಳೂರು ಕೇಂದ್ರ ಉಪವಿಭಾಗ ಎಸಿಪಿ ಪರಮೇಶ್ವರ ಹೆಗಡೆ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈವರೆಗೆ ನಡೆಸಿದ ತನಿಖೆಯಿಂದ ಸ್ಫೋಟ ನಡೆದ ಸ್ಥಳದ ಪರಿಶೀಲನೆ ವೇಳೆ ಸಿಕ್ಕ ವಸ್ತುಗಳು ಹಾಗೂ ಈವರೆಗೆ ಸಂಗ್ರಹಿಸಿದ ಸಾಕ್ಷ್ಯಧಾರದ ಮೇಲೆ UAPA Act ಹಾಗೂ ಆಧಾರ್ ಕಾರ್ಡ್ ಅನ್ನು ನಕಲಿ ಮಾಡಿದ ಕುರಿತು ಪೋರ್ಜರಿ ಕಲಂಗಳನ್ನು ಅಳವಡಿಸಿ ತನಿಖೆ ಮುಂದುವರಿಸಲಾಗಿದೆ. ಮಂಗಳೂರು ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಹಾಗೂ ಶಿವಮೊಗ್ಗ, ಮೈಸೂರು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳು ತನಿಖೆಯಲ್ಲಿ ಸಹಕರಿಸುತ್ತಿವೆ ಎಂದರು.
ಇಂದು ಮುಂಜಾನೆ ಶಿವಮೊಗ್ಗದ 4 ಕಡೆ, ಮಂಗಳೂರಿನ 1 ಕಡೆ ಹಾಗೂ ಮೈಸೂರಿನ 2 ಕಡೆ ಸೇರಿದಂತೆ ಒಟ್ಟು ರಾಜ್ಯದ 7 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಲಾಗಿದೆ. ಮಂಗಳೂರಿನಿಂದ ಒಬ್ಬರು, ಊಟಿಯಿಂದ ಒಬ್ಬರು ಮತ್ತು ಮೈಸೂರಿನಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ದೊಡ್ಡ ಅನಾಹುತ ತಪ್ಪಿತು: ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುವಾಗ ಸ್ಫೋಟವಾದ ಕಾರಣ ದೊಡ್ಡ ಅನಾಹುತವೇ ತಪ್ಪಿ ಹೋಗಿದೆ. ಘಟನೆಯಿಂದ ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿತ್ತು. ಜನರಿಗೆ ಪ್ರಾಣ ಹಾನಿ ಆಗಿಲ್ಲ. ಮೊದಲಿಗೆ ಉತ್ತಮ ಚಿಕಿತ್ಸೆ ನೀಡುತ್ತೇವೆ. ಪ್ರಶ್ನೆಗಳಿಗೆ ಉತ್ತರಿಸುವಷ್ಟು ಆರೋಪಿಯ ಆರೋಗ್ಯ ಸುಧಾರಣೆ ಆಗಬೇಕು. ಪುರುಷೋತ್ತಮ್ ಅವರಿಗೆ ಪರಿಹಾರಧನ ನೀಡುತ್ತೇವೆ. ಅವರಿಗೆ ಸಮಸ್ಯೆ ಆಗಿರುವ ಬಗ್ಗೆ ನಮಗೂ ನೋವಿದೆ ಎಂದರು.
ಐಸಿಸ್ ಸಂಘಟನೆಯಿಂದ ಪ್ರೇರಣೆ: ಶಾರೀಕ್‌ಗೆ ಅಬ್ದುಲ್ ಮತೀನ್ ಎಂಬಾತ ಜೊತೆಗೆ ಸಂಪರ್ಕವಿತ್ತು. ಅಬ್ದುಲ್ ಮತೀನ್ ಜಾಗತಿಕ ಉಗ್ರ ಸಂಘಟನೆ ಜೊತೆಗೆ ಲಿಂಕ್ ಇದೆ. ಆತನಿಂದಲೇ ಶಾರೀಕ್ ಉಗ್ರ ನಿಲುವಿನತ್ತ ಪ್ರೇರೇಪಣೆ ಪಡೆದಿದ್ದ ಎಂದು ಅಲೋಕ್ ಕುಮಾರ್ ತಿಳಿಸಿದರು.
ಖಚಿತಪಡಿಸಿದ ಕುಟುಂಬಸ್ಥರು: ಆಧಾರ್ ಫೋಟೋ ನೋಡಿದಾಗ ನಕಲಿ ಎಂದು ಗೊತ್ತಾಗಿತ್ತು. ನಿನ್ನೆ ಬೆಳಗ್ಗೆ ಶಾರೀಕ್ ಇರಬಹುದು ಎಂದು ಶಂಕಿಸಿದ್ದೆವು. ಆ ಬಳಿಕ ಅವರ ಕುಟುಂಬಸ್ಥರನ್ನು ಕರೆಸಿ ಖಚಿತಪಡಿಸಿಕೊಂಡೆವು.