ಮಂಗಳೂರು : ನಗರದಲ್ಲಿ ವೈದ್ಯರೊಂದಿಗೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎಚ್ಚರಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಅವರು, ಕೊರೊನಾ ಜಾಗತಿಕ ಮಹಾಮಾರಿಯಾಗಿದೆ. ಫ್ರಂಟ್‌ಲೈನ್ ವರ್ಕರ್ಸ್ ಆಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕುಟುಂಬದಿಂದ ಪ್ರತ್ಯೇಕ ಇದ್ದು, ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟಾದರೂ ಅವರ ಮೇಲೆ ಅನುಚಿತವಾಗಿ ವರ್ತಿಸುವ ಘಟನೆಗಳು ನಡೆಯುತ್ತಿವೆ ಎಂದರು.
ಯಾರೇ ಆಗಲಿ ರೋಗಿಗಳು, ರೋಗಿಗಳ ಕಡೆಯವರು, ಸಾಮಾಜಿಕ ಕಾರ್ಯಕರ್ತರು ಅವರ ಮೇಲೆ ಅನುಚಿತವಾಗಿ ವರ್ತಿಸಬಾರದು, ಆಸ್ಪತ್ರೆಯ ಆಸ್ತಿಗೆ ಹಾನಿಗೈಯ್ಯಲು ಮುಂದಾಗಬಾರದು. ಅಂತಹ ಘಟನೆ ನಡೆದರೆ ಯಾವುದೇ ವ್ಯಕ್ತಿಯಾದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.