ಉಳ್ಳಾಲ (ದಕ್ಷಿಣಕನ್ನಡ): ಅಪ್ರಾಪ್ತೆಗೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಸೋಮವಾರ ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಸೋಮವಾರ ಸಂಜೆ ಎಸ್ಎಸ್ಎಸಿಸಿ ವಿದ್ಯಾರ್ಥಿನಿ ಶಾಲೆಯಿಂದ ವಾಪಸಾಗಿ ತಲಪಾಡಿಗೆ ಬಂದು ಸಹೋದರಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದಳು. ಇದೇ ವೇಳೆ ಅದೇ ನಿಲ್ದಾಣದಲ್ಲಿ ನಿಂತಿದ್ದ ಮುವಾದ್ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿ, ಮನೆಗೆ ಬಿಡುವುದಾಗಿ ಹೇಳಿ ಕೈಹಿಡಿದು ಎಳೆದಿದ್ದಾನೆ. ತಕ್ಷಣ ವಿದ್ಯಾರ್ಥಿನಿ ಕಿರುಚಾಡಲು ಆರಂಭಿಸಿದಾಗ ಸ್ಥಳೀಯ ರಿಕ್ಷಾ ಚಾಲಕರು ಮುವಾದ್ ನನ್ನು ಹಿಡಿದು, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳದಲ್ಲೂ ಇಂತಹದ್ದೇ ಘಟನೆ: ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿಯ ಮೇಲೆ ಕೇರಳದ ಕೆಲವು ಯುವಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ ದಾಖಲಾಗಿದೆ. ಯುವಕರು ವಿವಿಧ ಸಂದರ್ಭದಲ್ಲಿ ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಮನೆಗೆ ಬರುವಾಗ ತಡವಾದ ಕುರಿತು ವಿಚಾರಿಸಿದಾಗ ಆಕೆ ಘಟನೆ ಬಗ್ಗೆ ತಿಳಿಸಿದ್ದಾಳೆ. ಐವರು ಆರೋಪಿಗಳು ಕೆಲವು ವರ್ಷಗಳಿಂದ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನು ಪೋಲಿಸರುವ ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ.
ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ಬಾಲಕಿಯರನ್ನು ಗರ್ಭವತಿಯನ್ನಾಗಿಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದರು. ಮೊದಲ ಪ್ರಕರಣದಲ್ಲಿ ಬಾಲಕಿಯನ್ನು ಗರ್ಭಿಣಿಯಾಗಲು ಕಾರಣನಾದ ಯುವಕನನ್ನು ಕಡಬ ಪೊಲೀಸರು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಆರೋಪಿ ತನ್ನ ಸೋದರ ಸಂಬಂಧಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ತಾಯಿ ಜತೆ ಬಾಲಕಿ ಕಡಬ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಗರ್ಭವತಿ ಆಗಿರುವುದು ಬೆಳಕಿಗೆ ಬಂದಿತ್ತು.
ಮತ್ತೊಂದು ಪ್ರಕರಣದಲ್ಲಿ ಬಾಲಕಿಯನ್ನು ಗರ್ಭವತಿಯನ್ನಾಗಿಸಿದ ಆರೋಪಿ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದರು. ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಕಾರ್ತಿಕ್ ಎಂಬುವವನನ್ನು ಪೋಕ್ಸೊ ಕಾಯ್ದೆ ಅಡಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ