ಈಕೆ ತುಳುನಾಡಿನ ಮಹಾದೇವಿ, ಅಭಯ ರಾಣಿ.. ಜಗದ್ವಿಖ್ಯಾತ ಅಬ್ಬಕ್ಕ ದೇವಿ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ. ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ದೇಶದ ಮೊದಲಿಗ ಹೋರಾಟಗಾರ್ತಿಯರಲ್ಲಿ ಒಬ್ಬಳು.
ಈಕೆ ಮೂಡುಬಿದಿರೆಯ ಚೌಟ ವಂಶಜಳು. ಉಳ್ಳಾಲ ಈಕೆಯ ರಾಜಧಾನಿ. 1525 ರಿಂದ 1582ರವರೆಗೆ ಅಬ್ಬಕ್ಕ ಉಳ್ಳಾಲ ಕೇಂದ್ರಿತ ಪ್ರಾಂತ್ಯದ ರಾಣಿಯಾಗಿದ್ದಳು. ಗೋವಾ ಮೇಲೆ ಹಿಡಿತ ಸಾಧಿಸಿದ್ದ ಪೋರ್ಚುಗೀಸರು 1525ರಲ್ಲಿ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು. ಉಲ್ಲಾಳ ಸಮೃದ್ಧ ಬಂದರು, ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು.
ಕರಾವಳಿಯ ಅಕ್ಕಿ, ಶುಂಠಿ,ಅಡಕೆ ,ಒಣಮೆಣಸು ಹಾಗೂ ದಾಲ್ಚಿನ್ನಿ ಗೆ ಯುರೋಪ್‌ನಾದ್ಯಂತ ಭಾರೀ ಬೇಡಿಕೆಯಿತ್ತು. ಇದು ಪೋರ್ಚುಗೀಸರ ಕಣ್ಣು ಕುಕ್ಕಿಸಿತ್ತು. ಕರಾವಳಿ ಭಾಗ ವಸಾಹತುಗೊಳಿಸಲು ಹವಣಿಸ್ತಿದ್ದಾಗ, ರಾಣಿ ಅಬ್ಬಕ್ಕ ತನ್ನ ಪ್ರಾಂತ್ಯದ ಜನರ ಹಿತ ರಕ್ಷಿಸಲು ಪೋರ್ಚುಗೀಸರನ್ನೇ ಏಕಾಂಗಿಯಾಗಿ ನಾಲ್ಕು ದಶಕ ಹಿಮ್ಮೆಟ್ಟಿಸಿದ್ದಳು. ಮುಂದೆ ಈಕೆಯಿಂದಾಗಿಯೇ 1930ರಲ್ಲಿ ನಡೆದ ಕೆನರಾ ದಂಗೆ, ಕೂಟದಂಗೆಗಳು ಬ್ರಿಟಿಷರ ವಿರುದ್ಧ ಧ್ವನಿಯೆತ್ತಲು ಸಾಧ್ಯವಾಯ್ತು ಅಂತಾರೆ ಇತಿಹಾಸಕಾರರು.
ವ್ಯಾಪಾರಕ್ಕಿಂತ ರಾಜಕೀಯ ನೆಲೆಗಾಗಿ ಪೋರ್ಚುಗೀಸರು ಹವಣಿಸಿದ್ದರು
ಚೌಟರು ಅಳಿಯ ಸಂತಾನ ಅನುಸರಿಸುವರು. ಹೀಗಾಗಿ, ಮಾವ ತಿರುಮಲರಾಯ ಅಬ್ಬಕ್ಕನಿಗೆ ಪಟ್ಟಕಟ್ಟಿದ. ಮಂಗಳೂರಿನ ಪ್ರಬಲ ಲಕ್ಷ್ಮಪ್ಪ ಅರಸನೊಂದಿಗೆ ಅಬ್ಬಕ್ಕನ ವಿವಾಹವಾಯ್ತು. ತಿರುಮಲರಾಯ ಅಬ್ಬಕ್ಕಳಿಗೆ ಯುದ್ಧ ಮತ್ತು ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ಟ. ಆದರೆ, ಲಕ್ಷ್ಮಪ್ಪನೊಂದಿಗಿನ ವಿವಾಹವು ಬಹಳ ಕಾಲ ಉಳಿಯಲಿಲ್ಲ, ಅಬ್ಬಕ್ಕ ಉಳ್ಳಾಲಕ್ಕೆ ಹಿಂತಿರುಗಿದಳು. ಈ ಕಾರಣಕ್ಕಾಗಿ ಪತಿ ಲಕ್ಷ್ಮಪ್ಪ ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೋರ್ಚುಗೀಸರ ಜತೆ ಸೇರಿದ್ದ.
ಪೋರ್ಚುಗೀಸರು ಕರಾವಳಿಯ ಹಲವು ಅರಸರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಆದರೆ, ನೆರೆಯ ಅರಸರುಗಳ ಮತ್ತು ಗಂಡ ಲಕ್ಷ್ಮಪ್ಪ, ಅಳಿಯರಾಮರಾಯನ ವಿರೋಧ ಲೆಕ್ಕಿಸದೇ ಅಬ್ಬಕ್ಕ ಪೋರ್ಚುಗೀಸರನ್ನೇ ಸೋಲಿಸಿದಳು. ಫಿರಂಗಿ ಶಸ್ತ್ರಾಸ್ತ್ರಗಳು ಹಾಗೂ ನೌಕಾ ದಳದ ಎದುರು ಕತ್ತಿ, ಗುರಾಣಿ ಹಿಡಿದೇ ಗೆದ್ದು ಬೀಗಿದ್ದಳು ಅಬ್ಬಕ್ಕ. ಮುಂದೆ ಇಡೀ ವಿಶ್ವದೆಲ್ಲೆಡೆ ಅಬ್ಬಕ್ಕ ದೇವಿಯ ಕೀರ್ತಿ ಬೆಳಗುವಂತಾಯ್ತು.
ರಾಣಿ ಅಬ್ಬಕ್ಕನನ್ನ ಕಾಣಲು ಬಂದಿದ್ದ ಇಟಲಿ ಪ್ರವಾಸಿಗ ಪಿತ್ರೊ ದಲ್ಲಾವಲ್ಲೆ
ಇಟಲಿ ಪ್ರವಾಸಿಗ ಪಿತ್ರೊ ದಲ್ಲಾವಲ್ಲೆ ಎಂಬಾತ ಆಗಿನ ಕಾಲಕ್ಕೆ ಜಗದ್ವಿಖ್ಯಾತ ಅರಸನಾಗಿದ್ದ ಷಾ ಅಬ್ಬಾಸ್‌ನನ್ನು ಭೇಟಿಯಾಗಲು ತೆರಳಿದ್ದ. ಈ ವೇಳೆ ದೊರೆ ಷಾ ಅಬ್ಬಾಸ್ ಇಟಲಿಯ ಪ್ರವಾಸಿಗನಿಗೆ ಪೋರ್ಚುಗೀಸರನ್ನೇ ಸೋಲಿಸಿದ ರಾಣಿ ಅಬ್ಬಕ್ಕನನ್ನು ಭೇಟಿಯಾಗಲು ಸೂಚಿಸಿದ್ದನಂತೆ. ಇದಿಷ್ಟೇ ಸಾಕಲ್ವೇ ರಾಣಿ ಅಬ್ಬಕ್ಕ ಆಗ ವಿಶ್ವದಲ್ಲೆಡೆ ಖ್ಯಾತಿ ಹೊಂದಿದ್ದಳು ಎಂಬುದಕ್ಕೆ ಸಾಕ್ಷಿ. ಅಬ್ಬಕ್ಕ ಪೋರ್ಚುಗೀಸರನ್ನು ಸೋಲಿಸಿ ಅವರು ರಾಜಕೀಯ ಪ್ರಾಬಲ್ಯ ಆಕಾಂಕ್ಷೆಗೆ ಕೊಳ್ಳಿ ಇಟ್ಟಿಳು. ಒಂದು ವೇಳೆ ಅಬ್ಬಕ್ಕ ಸೋತಿದ್ದರೆ ಭಾರತದ ಇತಿಹಾಸ ಬೇರೆ ಮಗ್ಗಲು ಬದಲಿಸುತ್ತಿತ್ತೇನೋ..
ರಾಣಿ ಅಬ್ಬಕ್ಕ 4 ಶತಮಾನದ ಹಿಂದೆ ಮಾಡಿದ್ದ ಸಾಧನೆ ದೇಶದ ಸ್ವಾತಂತ್ರ ಚಳವಳಿಗೂ ಪ್ರೇರಕ. ಉಳ್ಳಾಲದಲ್ಲಿ ಅಬ್ಬಕ್ಕನ ಕಾಲದ ಅರಮನೆ, ಕೋಟೆಗಳು ನಶಿಸಿವೆ. ಆದರೆ, ಅಬ್ಬಕ್ಕನ ಕೆಚ್ಚೆದೆಯ ಹೋರಾಟ ಭಾರತೀಯರಿಗೆ ಹೆಮ್ಮೆಯ ಗರಿ ಮೂಡಿಸುತ್ತೆ.