ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ಸಮೀಪದ ಪಂಜಿಕಲ್ಲು ಎಂಬಲ್ಲಿ ಕಾಡಾನೆಯೊಂದು ಹೆದ್ದಾರಿಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಂಡ ಬೈಕ್ ಸವಾರರು ಹಾಗೂ ಪ್ರಯಾಣಿಕರು ಆತಂಕಗೊಂಡ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮುರೂರು, ದೇವರಗುಂಡ, ದೇಲಂಪಾಡಿ, ಬೆಳ್ಳಿಪಾಡಿ ಹಾಗೂ ಕಡಬ ತಾಲೂಕಿನ ಮೀನಾಡಿಯ ನೈಲಾ ಪ್ರದೇಶದಲ್ಲಿ ಕಳೆದ ವರ್ಷ ಇಬ್ಬರನ್ನು ಕಾಡಾನೆಯೊಂದು ಬಲಿ ಪಡೆದಿತ್ತು. ಬೆತ್ತೋಡಿ, ಕೊಂಬಾರು, ಕೊಣಾಜೆ, ಇಚ್ಲಂಪಾಡಿ, ಬಲ್ಯ, ಸಿರಿಬಾಗಿಲು, ರೆಂಜಿಲಾಡಿ, ನೂಜಿಬಾಳ್ತಿಲ, ಶಿರಾಡಿ, ಉದನೆ, ಐತ್ತೂರು, ಬಿಳಿನೆಲೆ, ಮರ್ಧಾಳ, ಕೊಣಾಜೆ, ಕುಟುಪ್ಪಾಡಿ, ಕೌಕ್ರಾಡಿ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಮಾತ್ರವಲ್ಲದೇ, ಪುತ್ತೂರು ತಾಲೂಕಿನ ಕನಕಮಜಲು ಪಂಜಿಕಲ್ಲಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಶುಕ್ರವಾರ ಆನೆಗಳ ಹಿಂಡು ದಾಳಿ ನಡೆಸಿ ಹಣ್ಣಿನ ಗಿಡಗಳನ್ನು ಧ್ವಂಸಗೊಳಿಸಿವೆ.
ಅರಣ್ಯ ಇಲಾಖೆಯ ನರ್ಸರಿಯ ಸಮೀಪದಲ್ಲೇ ಸುಳ್ಯ ಮೂಲಕ ಹರಿಯುತ್ತಿರುವ ಪಯಸ್ವಿನಿ ನದಿಯ ನೀರು ಕುಡಿಯಲು ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ಪ್ರತಿದಿನ ಅಡ್ಡಾಡುತ್ತಿರುತ್ತವೆ. ಅಂತೆಯೇ, ಶುಕ್ರವಾರ ಮರಿ ಆನೆ ಸೇರಿದಂತೆ ನಾಲ್ಕೈದು ಆನೆಗಳು ಅರಣ್ಯ ಇಲಾಖೆಯ ನರ್ಸರಿಗೆ ನುಗ್ಗಿವೆ. ನರ್ಸರಿಯಲ್ಲಿ ಸೊಂಪಾಗಿ ಬೆಳೆಸಲಾಗಿದ್ದ ಹಲಸು, ಹೆಬ್ಬಲಸು, ಪುನರ್ಪುಳಿ ಮತ್ತಿತರೆ ವಿವಿಧ ಜಾತಿಯ ಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ಧ್ವಂಸಗೊಳಿಸಿವೆ.
ನ.10 ರಂದು ಬೆಳಗ್ಗೆ ಕಾಡಾನೆಯೊಂದು ಪಂಜಿಕಲ್ಲು ಬಳಿಯ ಮುಖ್ಯರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಸವಾರಿ ನಡೆಸಿದ್ದು, ಸಾರ್ವಜನಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಆನೆ ನಡೆದುಕೊಂಡು ಬರುತ್ತಿದ್ದ ವೇಳೆ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಸವಾರರು ಹಾಗೂ ವಾಹನ ಪ್ರಯಾಣಿಕರು ಭಯದಿಂದ ಕಿರುಚಾಡಿದ್ದು, ಆನೆ ಘೀಳಿಡುವ ಸದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಕಳೆದ ತಿಂಗಳಲ್ಲಿ ಕಡಬ ತಾಲೂಕಿನ ಮರ್ಧಾಳ ಸಮೀಪದ ಐತ್ತೂರು ಕೊಣಾಜೆ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಚೋಮ ಎಂಬುವರ ಮೇಲೆ ರಸ್ತೆ ಬದಿಯಲ್ಲಿದ್ದ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಚೋಮ ಅವರು ಇದೇ ತಿಂಗಳ ಏಳನೇ ತಾರೀಖಿನಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
2022ರ ಡಿ.31 ರಂದು ಕೂಲಿ ಕಾರ್ಮಿಕ ಶಿರಾಡಿ ಗ್ರಾಮದ ಜನತಾ ಕಾಲೊನಿ ನಿವಾಸಿ ತಿಮ್ಮಪ್ಪ ಎಂಬುವರು ಕೂಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರೆ, ಜತೆಗಿದ್ದ ಅವರ ಮಗ ಶರಣ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಶರಣ್ ಇನ್ನೂ ಸಂಪೂರ್ಣ ಗುಣಮುಖರಾಗದೆ ಇತ್ತೀಚೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
2023ರ ಫೆ.20 ರಂದು ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಪೇರಡ್ಕ ಹಾಲು ಸೊಸೈಟಿ ಉದ್ಯೋಗಿ ರಂಜಿತಾ ರೈ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬರ್ಬರವಾಗಿ ಕೊಂದು ಹಾಕಿತ್ತು. ಆಕೆಯ ಬೊಬ್ಬೆ ಕೇಳಿದ ರಮೇಶ್ ರೈ ಎಂಬುವರು ಸ್ಥಳಕ್ಕೆ ಆಗಮಿಸಿದಾಗ ಅವರನ್ನೂ ಕಾಡಾನೆ ಕೊಂದು ಹಾಕಿತ್ತು. ಕಡಬ ತಾಲೂಕಿನ ಅರಣ್ಯದಂಚಿನ ಪ್ರದೇಶಗಳಲ್ಲಿ ಕಳೆದೊಂದು ವರ್ಷದಲ್ಲಿ ಕಾಡಾನೆ ದಾಳಿಗೆ ನಾಲ್ವರು ಬಲಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ನಡುವೆ ಮೃತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ರೆಂಜಲಾಡಿ ಗ್ರಾಮದ ನೈಲ ರಂಜಿತಾ ರೈ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಲಭಿಸಿದ್ದು ಬಿಟ್ಟರೆ, ವಾರಸುದಾರರಿಲ್ಲ ಎನ್ನುವ ಕಾರಣಕ್ಕೆ ನೈಲಾ ನಿವಾಸಿ ರಮೇಶ್ ರೈ ಅವರ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರವನ್ನು ತಡೆಹಿಡಿಯಲಾಗಿದೆ. ಶಿರಾಡಿಯ ತಿಮ್ಮಪ್ಪ ಅವರ ಕುಟುಂಬಕ್ಕೆ ಈವರೆಗೆ ಕೇವಲ ಒಂದೂವರೆ ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗಿದೆ. ಅವರ ಮಗ ಶರಣ್ ಕುಮಾರ್ ಅವರ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಕುಟುಂಬ ಹೈರಾಣಾಗಿದೆ. ಚೋಮ ಅವರು ಕಾಡಾನೆ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಲಾಖೆ 60 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿತ್ತಾದರೂ ಇನ್ನೂ ಬಂದಿಲ್ಲವಂತೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು: ಮೃತಳ ಕುಟುಂಬಕ್ಕೆ ₹15 ಲಕ್ಷ ಪರಿಹಾರ
ಕೆಲ ದಿನಗಳ ಹಿಂದೆ ಕಡಬದ ಮರ್ಧಾಳದಲ್ಲಿ ಸಭೆ ಸೇರಿದ್ದ ಸಂತ್ರಸ್ತರು ಪಕ್ಷಾತೀತವಾಗಿ 'ಜಾಗೃತ ರೈತ ಕುಟುಂಬಗಳ ಒಕ್ಕೂಟ' ಎಂಬ ಸಂಘಟನೆ ರಚಿಸಿ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅಗ್ರಹಿಸಿ ಅ.26 ರಂದು ಬೃಹತ್ ಮೆರವಣಿಗೆ ನಡೆಸಿ ಕಡಬ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಕಾಡಾನೆಗಳನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಸೋಲಾರ್ ಬೇಲಿ ನಿರ್ಮಾಣ, ಪ್ರಾಣ ಹಾನಿ ಹಾಗೂ ಕೃಷಿ ಹಾನಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವ ಹಕ್ಕೊತ್ತಾಯದೊಂದಿಗೆ ಹೋರಾಟ ಆರಂಭವಾಗಿದ್ದು, ಮನವಿಗೆ ಸ್ಪಂದನೆ ದೊರೆಯದೇ ಹೋದಲ್ಲಿ ರಸ್ತೆ ತಡೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹಿಂಜರಿಯುವುದಿಲ್ಲ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.