ದಕ್ಷಿಣ ಕನ್ನಡ : ಕಾಗದವನ್ನು ಕತ್ತರಿಸಿ ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸಿದ ಕಡಬ ತಾಲೂಕಿನ ನೆಲ್ಯಾಡಿಯ ಯುವಕನೋರ್ವ “ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್”ನಲ್ಲಿ ತನ್ನ ಹೆಸರು ಸೇರಿಸಿಕೊಂಡಿದ್ದಾನೆ.
ಪೆನ್ಸಿಲ್, ಚಾಕು ಹಿಡಿದು ಪೇಪರ್ ಕಟ್ ಮಾಡಿ ಕಲಾ ಪ್ರಪಂಚವೇ ಬೆರಗಾಗುವಂತೆ ಮಾಡಿದ್ದಾನೆ ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಿತ್ ನೆಲ್ಯಾಡಿ. ಕೇವಲ 3 ನಿಮಿಷ 12 ಸೆಕೆಂಡುಗಳ ಅವಧಿಯಲ್ಲಿ ಬಿಳಿ ಮತ್ತು ಕಪ್ಪು ಕಾಗದದ ಹಾಳೆಯನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪೇಪರ್ನಲ್ಲಿ ಮೂಡಿಸಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಭಾರತದಿಂದ ಒಟ್ಟು ಮೂವರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನ ಗಳಿಸುವ ಮೂಲಕ ಪರೀಕ್ಷಿತ್ ದಾಖಲೆ ಬರೆದಿದ್ದಾನೆ. ಮೋದಿ ಮಾತ್ರವಲ್ಲದೇ ಹಲವಾರು ವಿಶಿಷ್ಟ ಚಿತ್ರ ಬಿಡಿಸುವಲ್ಲಿ ಈತ ಯಶಸ್ವಿಯಾಗಿದ್ದಾನೆ.
ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಪರೀಕ್ಷಿತ್, ಮಂಗಳೂರಿನ ಶಕ್ತಿನಗರದ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಪ್ರಸಿದ್ಧ ಕಲಾ ಶಿಕ್ಷಕ ಗೋಪಡ್ಕರ್ ಅವರಿಂದ ತರಬೇತಿ ಪಡೆದಿದ್ದಾನೆ. ಸ್ಟೆನ್ಸಿಲ್ ಕಟ್ ಕಲೆ ಮಾತ್ರವಲ್ಲದೆ, ಈತ ಬೆಂಕಿ ಬಳಸಿ ಮಾಡುವ ಫೈರ್ ಆರ್ಟ್ ಕೂಡಾ ಕರಗತ ಮಾಡಿಕೊಂಡಿದ್ದಾನೆ.