ಮಂಗಳೂರು: ಭಾರಿ ಮಳೆಗೆ ಮರವೊಂದು ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬಿದ್ದ ಘಟನೆ ನಂತೂರುನಲ್ಲಿ ನಡೆದಿದೆ.
ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ 17 ಮಕ್ಕಳು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಪಂಪ್ ವೆಲ್ ದಾರಿಯಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಹೆದ್ದಾರಿಯ ಪಕ್ಕದ ಗುಡ್ಡದ ಮೇಲಿಂದ ಒಂದು ಬೃಹತ್ ಮರ ಜಾರಿ ಬಿದ್ದಿದೆ. ಮರದ ರೆಂಬೆಗಳು ಶಾಲಾ ವಾಹನದ ಮೇಲೆ ಉರುಳಿ ಬಿದ್ದಿವೆ.
ಮರ ಪೂರ್ತಿ ವಾಹನದ ಮೇಲೆ ಬೀಳದ್ದಕ್ಕೆ ವಿದ್ಯಾರ್ಥಿಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ಬಿದ್ದ ಮರವನ್ನು ಕಡಿದು ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು. ಸ್ಥಳಕ್ಕೆ ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.