ಬೆಳ್ತಂಗಡಿ: ವಿದ್ಯುತ್ ಸಂಪರ್ಕ ಹಾಗೂ ಮೂಲಸೌಕರ್ಯವಿಲ್ಲದ ಇಲ್ಲಿನ ಬಡ ಕುಟುಂಬಕ್ಕೆ ನೆರವಾದ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ್ ಜನ ಮೆಚ್ಚುಗೆ ಗಳಿಸಿದ್ದಾರೆ.
ಧರ್ಮಸ್ಥಳ ಸಮೀಪದ ನಾರ್ಯ ಎಂಬಲ್ಲಿ ಚಿಕ್ಕ ಮನೆಯೊಂದರಲ್ಲಿ ವೃದ್ಧೆ ಸೇರಿ ನಾಲ್ಕು ಮಕ್ಕಳು ವಾಸವಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಪಂಚಾಯಿತಿ ಸದಸ್ಯ ಸುಧಾಕರ್ ಗಮನಕ್ಕೆ ಬರುತ್ತಿದ್ದಂತೆ ಒಂದೇ ದಿನದಲ್ಲಿ ವಿದ್ಯುತ್ ಹಾಗೂ 1 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ಸೌಲಭ್ಯ ಒದಗಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸುಧಾಕರ್, ಆ ಕುಟುಂಬಸ್ಥರು ಅನುಭವಿಸುತ್ತಿದ್ದ ಸಂಕಷ್ಟದ ಬಗ್ಗೆ ಕೆಲವರು ನನ್ನ ಗಮನಕ್ಕೆ ತಂದರು. ಪಂಚಾಯಿತಿ ಸಹಕಾರದಿಂದ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆ ಕೂಡ ದುರಸ್ತಿಗೆ ಬಂದಿದ್ದು, ಇದನ್ನು ಸರಿಪಡಿಸಬೇಕಿದೆ ಎಂದರು.
ಮನೆಯಲ್ಲಿರುವ ವೃದ್ಧೆಯ 4 ಜನ ಮಕ್ಕಳಿಗೂ ದೃಷ್ಟಿ ದೋಷವಿದ್ದು, ಸರ್ಕಾರ ನೀಡುತ್ತಿರುವ ಮಾಸಿಕ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.