ಬೆಳ್ತಂಗಡಿ : ಪಟ್ಟಣ ಪಂಚಾಯತ್ ಪಂಪ್ ಹೌಸ್ ಬಳಿಯ ಸೋಮಾವತಿ ನದಿಯಲ್ಲಿ ಮಂಗಳವಾರ ಸಂಜೆ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತರನ್ನು ಉಜಿರೆ ಶಿವಾಜಿನಗರ ನಿವಾಸಿ ರಮೇಶ್ (48) ಎಂದು ಗುರುತಿಸಲಾಗಿದೆ. ಉಜಿರೆ ಸಮೀಪದ ರಮೇಶ್ ಹಾಗೂ ಇನ್ನೋರ್ವ ವ್ಯಕ್ತಿ ಸೋಮವಾರ ಸಂಜೆ ಸೋಮಾವತಿ ನದಿಗೆ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗ್ತಿದೆ. ರಮೇಶನ ಮನೆಯವರು ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹುಟುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೃತ ರಮೇಶನ ಮನೆಯವರು ನಾಪತ್ತೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್ಐ ನಂದಕುಮಾರ್ ಅವರ ತಂಡ ತನಿಖೆ ಕೈಗೆತ್ತಿಕೊಂಡಿತ್ತು. ಉಜಿರೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ರಮೇಶ್ ಹಾಗೂ ಜತೆಯಲ್ಲಿ ವ್ಯಕ್ತಿವೋರ್ವ ಆಟೋ ರಿಕ್ಷಾದಲ್ಲಿ ಒಟ್ಟಿಗೆ ತೆರಳಿದ್ದು, ಬೆಳ್ತಂಗಡಿ ಸೇತುವೆ ಬಳಿ ಇಳಿದ ಮಾಹಿತಿ ಸಿಕ್ಕಿದೆ. ಇದರ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೆಳ್ತಂಗಡಿ ಪಂಪ್ ಹೌಸ್ ನದಿ ಬಳಿ ಬಟ್ಟೆ ಹಾಗೂ ಮೊಬೈಲ್ ಇನ್ನಿತರ ವಸ್ತುಗಳು ಸಿಕ್ಕಿದ್ದವು. ಅಗ್ನಿ ಶಾಮಕದಳದ ತಂಡ ಸೋಮಾವತಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಸಂಜೆಯ ವೇಳೆ ರಮೇಶ ಅವರ ಮೃತದೇಹ ಪತ್ತೆಯಾಗಿದೆ.
ಓದಿ :ವ್ಯಾನ್-ಬೈಕ್ ನಡುವೆ ಅಪಘಾತ: ಓರ್ವ ಸಾವು, ಮತ್ತೋರ್ವನಿಗೆ ಗಾಯ
ಜತೆಯಲ್ಲಿ ತೆರಳಿದ್ದ ವ್ಯಕ್ತಿಯನ್ನ ಸಿಸಿಟಿವಿ ಆಧಾರದ ಮೇಲೆ, ಉಜಿರೆ ಬಳಿ ಇರುವ ಕುರಿತು ಮಾಹಿತಿ ಲಭಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.