ಸುಬ್ರಹ್ಮಣ್ಯ (ದ.ಕ): ವಿಶ್ವ ಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ದೇವಳದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
2021ನೇ ಸಾಲಿನ ಮಾ 31, ಏ 25, ಮೇ 21, ಜೂ. 27 ಹಾಗೂ ಜು. 7ರಂದು ಸರಳ ಸಾಮೂಹಿಕ ವಿವಾಹವು ಬೆಳಗಿನ ಅಭಿಜಿನ್ ಲಗ್ನ ಸುಮೂಹೂರ್ತದಲ್ಲಿ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಲಿದೆ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಸಾಮೂಹಿಕ ವಿವಾಹವಾಗಲು ಬಯಸುವ ವಧು-ವರರು ಶ್ರೀ ದೇವಳದ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಆದರ್ಶ ವಿವಾಹಕ್ಕೆ ಧನಸಹಾಯ
ಸರಳ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್, ಶಲ್ಯ, ಪೇಟ, ಬಾಸಿಂಗ ಇತ್ಯಾದಿಗಳಿಗೆ ರೂ. 5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಾಲುಂಗುರ ಇತ್ಯಾದಿಗಳಿಗೆ ರೂ. 10 ಸಾವಿರ ನೀಡಲಾಗುವುದು. ರೂ. 40 ಸಾವಿರ ಮೌಲ್ಯದ ಅಂದಾಜು 8 ಗ್ರಾಂ ತೂಕದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ನೀಡಲಾಗುವುದು.
ಈ ಮೂಲಕ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿಯಲ್ಲಿ ರೂ. 10 ಸಾವಿರ ನಿಶ್ಚಿತ ಠೇವಣಿ ನೀಡಲಾಗುವುದು. ಅಲ್ಲದೆ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಠ ಜಾತಿಯ ಜೋಡಿಗೆ ಸರಳ ವಿವಾಹ ಯೋಜನೆಯಡಿಯಲ್ಲಿ ರೂ. 50 ಸಾವಿರ ಒದಗಿಸಲಾಗುವುದು. ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು ಎಂದಿದ್ದಾರೆ.
ಸರ್ಪ ಸಂಸ್ಕಾರ ಸೇವೆ ಹೆಚ್ಚಳ
ಕುಕ್ಕೆ ದೇವಳದಲ್ಲಿ ಈ ಹಿಂದೆ ಪ್ರತಿ ದಿನ 72 ಸರ್ಪ ಸಂಸ್ಕಾರ ಸೇವೆ ನಡೆಸಲಾಗುತ್ತಿತ್ತು. ಆದರೆ ಭಕ್ತರ ಬೇಡಿಕೆಯ ಮೇರೆಗೆ ಅದನ್ನು 150ಕ್ಕೆ ಏರಿಸಲಾಗಿದೆ. ಅಲ್ಲದೆ ಆನ್‌ಲೈನ್ ಮೂಲಕ ಸರ್ಪ ಸಂಸ್ಕಾರ ಸೇವೆ ಕಾಯ್ದಿರಿಸುವ ವ್ಯವಸ್ಥೆಯನ್ನು ಭಕ್ತರ ಅನುಕೂಲತೆಗಾಗಿ ಆರಂಭಿಸಲಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ ಕಡಿಮೆ ಸೇವೆಗಳನ್ನು ನಡೆಸಲಾಗುತ್ತಿತ್ತು. ಆದರೆ ಇದೀಗ ಭಕ್ತರ ಬೇಡಿಕೆಗೆ ಅನುಗುಣವಾಗಿ ಸೇವೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಇತ್ಯಾದಿ ಪ್ರಮುಖ ಸೇವೆಗಳನ್ನು ಭಕ್ತರ ಬೇಡಿಕೆ ಅನುಗುಣವಾಗಿ ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.
ತಾತ್ಕಾಲಿಕ ಛತ್ರ ನಿರ್ಮಾಣ
ಕ್ಷೇತ್ರದ ರಥಬೀದಿಯ ಪಕ್ಕದಲ್ಲಿ ಭಕ್ತರಿಗೆ ವಿಶ್ರಾಂತಿ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ವಿಶ್ರಾಂತಿ ಧಾಮ ನಿರ್ಮಾಣ ಮಾಡಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಶೀಘ್ರವೇ ಅಭಿವೃದ್ಧಿ ಸಮಿತಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಇದರ ರೂಪುರೇಷೆಗಳನ್ನು ನಿರ್ಧರಿಸಲಾಗುವುದು. ಮುಂದಿನ ಬೇಸಿಗೆ ಮತ್ತು ಮಳೆಗಾಲದಲ್ಲಿ ಭಕ್ತರಿಗೆ ವಿಶ್ರಾಂತಿ ಪಡೆಯಲು ಛತ್ರ ಆವಶ್ಯಕವಾದ ಕಾರಣ ಈ ಬಗ್ಗೆ ಶೀಘ್ರ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವೆ: ಈಟಿವಿ ಭಾರತ ಜತೆ 'ರಾಧೆಶ್ಯಾಮ್' ನಟಿ ಪೂಜಾ ಹೆಗ್ಡೆ ಮಾತು!