ಮಂಗಳೂರು : ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯೊಬ್ಬಳ ಮಾತಿಗೆ ಮರುಳಾಗಿ ಮಂಗಳೂರಿನ ಯುವಕನೊಬ್ಬ ತನ್ನ ಅಶ್ಲೀಲ ಭಂಗಿ ತೋರಿಸಿದ್ದು ಆತನಿಗೆ ಮುಳುವಾಗಿದೆ.
ಇದೇ ವರ್ಷದ ಆಗಸ್ಟ್ನಲ್ಲಿ ಸಾಕ್ಷಿರಾಜ್ ಎಂಬ ಯುವತಿ ಮಂಗಳೂರಿನ ಯುವಕನೋರ್ವನಿಗೆ ಪರಿಚಯವಾಗಿದ್ದಳು. ಪರಿಚಯವಾದ ಇವರಿಬ್ಬರು ಮೆಸೆಂಜರ್ನಲ್ಲಿ ಸಂಪರ್ಕದಲ್ಲಿದ್ದು, ಆಕೆ ಈತನಿಗೆ ಅಶ್ಲೀಲ ಭಂಗಿಯ ಫೋಟೊ ಕಳುಹಿಸುತ್ತಿದ್ದಳಂತೆ. ಜೊತೆಗೆ ಖರ್ಚಿಗೆಂದು ಈತನ ಬಳಿ ಹಣ ಕೇಳಿ ಫೋನ್ ಪೇ ಮೂಲಕ ಪಡೆಯುತ್ತಿದ್ದಳಂತೆ.
ಇತ್ತೀಚೆಗೆ ಈಕೆ ತನ್ನದೇ ಅಶ್ಲೀಲ ಭಂಗಿಯನ್ನು ಮೆಸೆಂಜರ್ನಲ್ಲಿ ಈತನಿಗೆ ತೋರಿಸಿದ್ದಾಳೆ. ಅಷ್ಟು ಮಾತ್ರವಲ್ಲದೆ ಆತನಲ್ಲಿಯೂ ಅಶ್ಲೀಲ ಭಂಗಿಯಲ್ಲಿ ಇರುವಂತೆ ಹೇಳಿದ್ದಾಳೆ. ಆಕೆಯ ಮಾತನ್ನು ನಂಬಿದ ಈತ ಅವಳು ಹೇಳಿದ ಹಾಗೆ ಕೇಳಿದ್ದಾನೆ. ಇದನ್ನು ಚಿತ್ರೀಕರಣ ಮಾಡಿಕೊಂಡ ಈಕೆ, ತನ್ನ ಸಹಚರರ ಮೂಲಕ ಹಣಕ್ಕಾಗಿ ಈತನಿಗೆ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾಳೆ.
ಹಣ ಕೊಡದಿದ್ದರೆ ಅಶ್ಲೀಲ ಭಂಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾಳೆ. ಈಕೆಯ ಬ್ಲ್ಯಾಕ್ ಮೇಲ್ನಿಂದ ಹಣ ಕಳೆದುಕೊಂಡ ಯುವಕ ಇದೀಗ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.