ಮಂಗಳೂರು: ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೆ ಸಂಭ್ರಮದಿಂದ ಆಚರಿಸುತ್ತದೆ. ಗಣೇಶನ ಮೂರ್ತಿಯನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರ. ಮಂಗಳೂರಿನಲ್ಲೊಂದು ಕುಟುಂಬ ನಾಲ್ಕನೇ ತಲೆಮಾರುಗಳಿಂದ ಗಣೇಶನ ಮೂರ್ತಿ ತಯಾರಿಯಲ್ಲಿ ಮಗ್ನವಾಗಿದೆ.
ಗಣೇಶ ಗೃಹದಲ್ಲಿ ಗಜಮುಖನ ತಯಾರಿಕೆ: ಹೌದು, ಮಂಗಳೂರಿನ ಮಣ್ಣಗುಡ್ಡೆಯ ಗಣೇಶ ಗೃಹಕ್ಕೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಗಣಪತಿ ಮೂರ್ತಿಗಳ ರಾಶಿ. ಸಣ್ಣ ಗಣಪತಿ ಮೂರ್ತಿಯಿಂದ ಹಿಡಿದು ಹತ್ತಕ್ಕೂ ಹೆಚ್ಚು ಅಡಿಯ ಗಣಪತಿಗಳು ಇಲ್ಲಿವೆ. ಈ ಬಾರಿ 235 ಗಣಪತಿಗಳನ್ನು ತಯಾರಿಸಲಾಗಿದೆ. ಈ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವುದು ಒಂದೇ ಕುಟುಂಬದ ಸದಸ್ಯರು. ಇದು ಗಣಪತಿ ತಯಾರಿಕೆಯ 93ನೇ ವರ್ಷವಾಗಿದೆ.
ಸರ್ಕಾರಿ ಅಧಿಕಾರಿಗಳಿರುವ ಕುಟುಂಬ: ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಇದೀಗ ನಾಲ್ಕನೇ ತಲೆಮಾರು ತೊಡಗಿಸಿಕೊಂಡು ಬಂದಿದೆ. ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರ ಕುಟುಂಬ ವೃತ್ತಿಪರ ಕಲಾವಿದರು ಅಲ್ಲ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು. ಆದರೆ ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲದಂತೆ ಸುಂದರ ಗಣಪತಿಯನ್ನು ತಯಾರಿಸುತ್ತಾರೆ.
ದಿವಂಗತ ಮೋಹನ್ ರಾವ್ ಅವರ ಮೂವರು ಪುತ್ರರಾದ ಪ್ರಭಾಕರ ರಾವ್, ಸುಧಾಕರ್ ರಾವ್, ರಾಮಚಂದ್ರ ರಾವ್, ಮೊಮ್ಮಕ್ಕಳಾದ ಬಾಲಕೃಷ್ಣ ರಾವ್, ವೆಂಕಟೇಶ್ ರಾವ್, ಮಹೇಶ್ ರಾವ್, ಪೂನಂ ಮತ್ತು ಪ್ರೀತಮ್ ರಾವ್, ಮರಿ ಮಕ್ಕಳಾದ ಕೃಪ, ಶಿಲ್ಪ, ಅಂಕಿತ್, ಅಂಕುಶ್ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯರು ಮೂರ್ತಿ ತಯಾರಿಯಲ್ಲಿ ತೊಡಗಿಸಿಕೊಂಡರೆ, ಉಳಿದವರು ಮೂರ್ತಿಗೆ ಬಣ್ಣ ಬಳಿಯುವುದು, ಅಲಂಕಾರ ಮಾಡುತ್ತಾರೆ.
ದಿವಂಗತ ಮೋಹನ್ ರಾವ್ ಅವರು ಮುಂಬೈನಲ್ಲಿದ್ದ ವೇಳೆ ಅಲ್ಲಿ ಗಣೇಶ ಮೂರ್ತಿ ತಯಾರಿಕೆಯನ್ನು ನೋಡಿ ಸ್ಫೂರ್ತಿ ಪಡೆದ ಅವರು, ಮಂಗಳೂರಿಗೆ ಬಂದು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಬಳಿಕ ವರ್ಷಕ್ಕೆ ಬೇಡಿಕೆಯಂತೆ 50 ರಷ್ಟು ಗಣಪತಿ ಮೂರ್ತಿ ತಯಾರಿಸುತ್ತಿದ್ದರು. ಇದೀಗ ಮೋಹನ್ ರಾವ್ ಅವರ ಕುಟುಂಬ ವರ್ಷಕ್ಕೆ 235 ಗಣಪತಿ ಮೂರ್ತಿಯನ್ನು ತಯಾರಿಸುತ್ತಿದೆ.
ಇವರು ತಯಾರಿಸುವ ಗಣಪತಿಗೆ ಆವೆ ಮಣ್ಣು ಬಳಸುತ್ತಿದ್ದು, ಸುಮಾರು 18 ಕಡೆಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಇಡುವ ಗಣಪತಿ ಮೂರ್ತಿಗಳನ್ನು ಇವರು ತಯಾರಿಸುತ್ತಿದ್ದಾರೆ. ಈ ಬಾರಿ 75ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿರುವ ಸಂಘನಿಕೇತನದ ಗಣೇಶನ ಮೂರ್ತಿಯನ್ನು ಇದೇ ಕುಟುಂಬ ತಯಾರಿಸುತ್ತಿರುವುದು ವಿಶೇಷ.
ಇದನ್ನೂ ಓದಿ:ಗಣೇಶ ಮೂರ್ತಿಗೆ ಹೆಸರುವಾಸಿ ಬೆಂಗಳೂರಿನ ಆರ್ವಿ ರಸ್ತೆ.. ಲಾಭದ ನಿರೀಕ್ಷೆಯಲ್ಲಿ ವ್ಯಾಪಾರಿಗಳು