ಕಡಬ(ದ.ಕ): ಕಡಬದ ಎರಡು ದಲಿತ ಕುಟುಂಬಕ್ಕೆ 94c ಅಡಿ ಜಾಗ ಮಂಜೂರುಗೊಂಡಿದ್ದರೂ ಕಡಬ ತಹಶೀಲ್ದಾರ್ ಹಕ್ಕು ಪತ್ರಕ್ಕಾಗಿ ಕಳೆದ ಮೂರು ವರ್ಷದಿಂದ ಸತಾಯಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ತಾಲೂಕಿನ ಕಳಾರ ಎಂಬಲ್ಲಿ ಸುಮಾರು 60 ವರ್ಷಗಳಿಂದ ವಾಸವಾಗಿರುವ ವಿಧವೆ ಮಹಿಳೆ ಮಾಣಿಗೋ ಮತ್ತು ಪಿಜಿನ ಎಂಬುವರು ಮೂರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಅಲೆದಾಟ ಮಾಡುತ್ತಿರುವ ಕುಟುಂಬ. ಇದೀಗ ಕಡಬ ತಹಶೀಲ್ದಾರ್‌ರ ಸ್ಪಂದನೆ ಸಿಗದ ಹಿನ್ನೆಲೆ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ದೂರು ನೀಡಿ ಹಕ್ಕು ಪತ್ರ ನೀಡುವಂತೆ ವಿನಂತಿಸಿದ್ದಾರೆ.
ವಿಧವೆ ಮಾಣಿಗೊ ಎಂಬುವರು ಸ.ಸಂ 16-1ಎ ರಲ್ಲಿ ಪೈಕಿ 0.03 ಎಕ್ರೆ ವಿಸ್ತೀರ್ಣದ ಸ್ಥಿರಾಸ್ತಿಯಲ್ಲಿ ಕಡಬ ಗ್ರಾಪಂ (ಈಗಿನ ಪಪಂ) ಒಳಪಟ್ಟ ಮನೆ ನಂ 2-138ರಲ್ಲಿ ವಾಸವಿದ್ದಾರೆ. ಪಿಜಿನ ಎಂಬುವರು ಸ.ನಂ 16-1ಎ ರ ಪೈಕಿ 0.03ಎಕರೆ ವಿಸ್ತೀರ್ಣದ ಸ್ಥಿರಾಸ್ತಿಯಲ್ಲಿ ಮನೆ ನಂಬರ್ 2-136ರಲ್ಲಿ ವಾಸವಾಗಿದ್ದಾರೆ. ಈ ಎರಡು ಕುಟುಂಬಕ್ಕೂ 2017ರಲ್ಲಿ ಜಾಗ ಮಂಜೂರುಗೊಂಡಿದೆ.
ಭೂ ಮಾಪಕರು ಐದು ಬಾರಿ ಅಳತೆ ಮಾಡಿ ನಕ್ಷೆ ತಯಾರಿಸಿ ಕಂದಾಯ ನಿರೀಕ್ಷಕರು ತನಿಖೆ ನಡೆಸಿ ನಿವೇಶನ ಮಂಜೂರುಗೊಳಿಸಿದ್ದರು. ಅಲ್ಲದೆ ತಹಶೀಲ್ದಾರ್‌ರ ನಡವಳಿಯಂತೆ ಜಮೀನು ಮಂಜೂರುಗೊಳಿಸುವ ಸಲುವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ರೂ. 917ರಂತೆ ಇವರು ಪಾವತಿಸಿದ್ದಾರೆ. ಆದರೆ, ಮೂರು ವರ್ಷ ಕಳೆದ್ರೂ ಈ ತನಕ ಇವರಿಗೆ ಹಕ್ಕು ಪತ್ರ ನೀಡಿಲಾಗಿಲ್ಲ.
ಸೆ.25ರಂದು ತಹಶೀಲ್ದಾರ್ ಜಾನ್ ಪ್ರಕಾಶ್ ಅವರ ಬಳಿ ವಿಧವೆ ಮಾಣಿಗೋ ಎಂಬುವರು ವಿಚಾರಿಸಲು ಹೋದಾಗ ನಿಮಗೆ ಬಳಿ ಹಕ್ಕು ಪತ್ರ ಕೊಡಲು ಸಾಧ್ಯವಿಲ್ಲ ಎಂದಿದ್ದರಂತೆ. ಬಳಿಕ ತಹಶೀಲ್ದಾರ್‌ರು ಪಿಜಿನ ಅವರ ಮಗ ರಾಘವ್ ಅವರಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿದ್ದರು. ಕಚೇರಿಗೆ ಹೋಗಿ ತಹಶೀಲ್ದಾರ್‌ರ ಬಳಿ ರಾಘವ ಅವರು ವಿಚಾರಿಸಿದಾಗ 94cಯಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಮತ್ತು ತಾನು ಬೆಂಗಳೂರಿಗೆ ವರ್ಗಾವಣೆಯಾಗಿ ಹೋದ್ರೂ 94c ಅಡಿ ಮಾಡಿಕೊಡುತ್ತೇನೆ ಎಂದು ತಹಶಿಲ್ದಾರ್‌ರು ಹೇಳಿದ್ದರಂತೆ ಹಾಗೂ ಸರ್ಕಾರಕ್ಕೆ ಕಟ್ಟಿರುವ ಹಣ ವಾಪಸು ಕೊಡುವುದಾಗಿ ಹೇಳಿದ್ದಾರೆ.
ಈ ನಡುವೆ ನಮ್ಮ ಕುಟುಂಬ ತಹಶೀಲ್ದಾರ್ ಕಚೇರಿ ಎದುರು ಹಕ್ಕು ಪತ್ರ ಸಿಗುವವರೆಗೆ ಧರಣಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ರಾಘವ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶೀಲ್ದಾರ್‌ರಾದ ಜಾನ್ ಪ್ರಕಾಶ್ ರೋಡ್ರಿಗಸ್, ಈ ಜಾಗಕ್ಕೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಿದ ಹಿನ್ನೆಲೆ ಹಕ್ಕುಪತ್ರ ನೀಡಲಾಗಿಲ್ಲ ಎಂದಿದ್ದಾರೆ.