ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಸಂದರ್ಭ ನಡೆಯುವ ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನ ಇಂದು ಸಂಜೆ 5 ಗಂಟೆಗೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಚಾಲನೆಗೊಳ್ಳಲಿದೆ.
ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದು, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಾಧಿಕಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದು, ಖ್ಯಾತ ಕಥೆಗಾರ ಬೆಂಗಳೂರಿನ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಸಂಪರ್ಕ ಅಧಿಕಾರಿ ರೆ. ಫಾ. ಚೇತನ್ ಲೋಬೊ ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನದ ಬಳಿಕ ರಾತ್ರಿ 8 ರಿಂದ 10 ಗಂಟೆಯವರೆಗೆ ಬೆಂಗಳೂರಿನ ಸಂಗೀತ ಕಲಾರತ್ನ ಡಾ. ಆರ್. ಮಂಜುನಾಥ ತಂಡದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಆರಂಭ
ಶ್ರೀಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ : ಕಾರ್ತಿಕ ಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ 2ನೇ ದಿನ ಶ್ರೀ ಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ ಶುಕ್ರವಾರ ರಾತ್ರಿ ನೆರವೇರಿತು. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಹೊಂದಿದರು. 3ನೇ ದಿನ ಶನಿವಾರದಂದು ಶ್ರೀ ಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಿತು. 4ನೇ ದಿನವಾದ ಇಂದು ರಾತ್ರಿ 9 ಗಂಟೆಗೆ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ.
ಲಕ್ಷ ದೀಪೋತ್ಸವದ 2ನೇ ದಿನ ಶುಕ್ರವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕೆರೆಕಟ್ಟೆ ಉತ್ಸವಕ್ಕೆ ಮೆರವಣಿಗೆ ಮೂಲಕ ತರಲಾಯಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಕೆರೆಕಟ್ಟೆಯಲ್ಲಿ ಉತ್ಸವ ನಡೆದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರನ್ನು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಉತ್ಸವ ನಡೆಸಲಾಯಿತು. ಭಕ್ತರು ಈ ರಥೋತ್ಸವವನ್ನು ಭಕ್ತಿ ಭಾವದಿಂದ ಎಳೆಯುವ ಮೂಲಕ ಭಕ್ತಿ ಮೆರೆದರು.
ಲಕ್ಷ ದೀಪೋತ್ಸವದ 3ನೇ ದಿನ ಲಲಿತಕಲಾ ಗೋಷ್ಠಿಯಲ್ಲಿ ಸಂಜೆ 7 ರಿಂದ ಸಾದ್ವಿನಿ ಕೊಪ್ಪ ತಂಡದಿಂದ ಸುಗಮ ಸಂಗೀತ ಹಾಗೂ ರಾತ್ರಿ 8-30ರಿಂದ ಸತ್ಯನಾರಾಯಣ ರಾಜು ಅವರಿಂದ ರಾಮಕಥಾ ನೃತ್ಯ ರೂಪಕ ನಡೆಯಿತು.